ಎಐಎಡಿಎಂಕೆಯಿಂದ ಮತದಾರರಿಗೆ ಲಂಚ; ಸ್ಟಾಲಿನ್ ಆರೋಪ

Update: 2017-12-17 16:33 GMT

ಚೆನ್ನೈ, ಡಿ.17: ಮುಂಬರುವ ಆರ್‌ಕೆ ನಗರ ಉಪಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತಹಾಕುವಂತೆ ಆಡಳಿತಾರೂಡ ಎಐಎಡಿಎಂಕೆ ಪಕ್ಷವು ಮತದಾರರಿಗೆ ಬೃಹತ್ ಮೊತ್ತದ ಹಣವನ್ನು ಹಂಚುತ್ತಿದೆ ಎಂದು ಆರೋಪಿಸಿ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ಆಡಳಿತಾರೂಢ ಎಐಎಡಿಎಂಕೆ ಪಕ್ಷವು ನೂರು ಕೋಟಿ ರೂ.ಗೂ ಅಧಿಕ ಹಣವನ್ನು ಮತದಾರರಿಗೆ ಹಂಚುತ್ತಿದೆ ಎಂದು ಆರೋಪಿಸಿರುವ ಸ್ಟಾಲಿನ್ ಎಐಎಡಿಎಂಕೆ ಅಭ್ಯರ್ಥಿ ಇ ಮಧುಸೂಧನ್ ಅವರನ್ನು ಅನರ್ಹಗೊಳಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದು ಎಐಎಡಿಎಂಕೆ ಪಕ್ಷದ ವಿರುದ್ಧ ಮತ್ತು ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಆರ್‌ಕೆ ನಗರ ಉಪಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.

ಈ ಉಪಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿಯಾಗಿ ಮಾಜಿ ಸಚಿವರಾದ ಇ ಮಧುಸೂಧನ್ ಕಣಕ್ಕಿಳಿದಿದ್ದರೆ ಡಿಎಂಕೆ ಎನ್ ಮುರುದು ಗಣೇಶ್ ಅವರನ್ನು ಅಭ್ಯರ್ಥಿಯನ್ನಾಗಿ ಆರಿಸಿದೆ ಜೊತೆಗೆ ಎಐಎಡಿಎಂಕೆಯ ಮತ್ತೊಂದು ವಿಭಾಗದ ನಾಯಕ ಟಿಟಿವಿ ದಿನಕರನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ.

ಕಳೆದ ವರ್ಷ ಡಿಸೆಂಬರ್ ಐದರಂದು ಮುಖ್ಯಮಂತ್ರಿ ಜಯಲಲಿತಾ ನಿಧನದ ನಂತರ ತೆರವಾಗಿದ್ದ ಆರ್‌ಕೆ ನಗರ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಆಡಳಿತಾರೂಢ ಪಕ್ಷಕ್ಕೆ ಇದು ಸತ್ವಪರೀಕ್ಷೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News