ಕೊಪ್ಪ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ
ಕೊಪ್ಪ, ಡಿ. 17: ಶೃಂಗೇರಿ ಕ್ಷೇತ್ರ ಬ್ಯಾರಿಗಳ ಒಕ್ಕೂಟದ ಆಶ್ರಯದಲ್ಲಿ ಇಂದು ಕೊಪ್ಪದ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷ ಕೆ.ಮುಹಮ್ಮದ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ. ಮುಹಮ್ಮದ್ ಅವರು ಇದುವರೆಗೂ ಅಕಾಡಮಿಯ ಕಾರ್ಯಕ್ರಮಗಳು ತಲುಪದೇ ಇರುವ ಸ್ಥಳಗಳಿಗೆ ಬ್ಯಾರಿ ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸಲು ನನ್ನ ಅವಧಿಯಲ್ಲಿ ಪ್ರಯತ್ನಿಸಲಾಗುವುದು. ಮಂಗಳೂರು ವಿ.ವಿ.ಯಲ್ಲಿ ಬ್ಯಾರಿ ಅಧ್ಯಯನ ಪೀಠದ ಸ್ಥಾಪನೆ ಆಗಬೇಕಿದೆ, ಚಿಕ್ಕಮಗಳೂರು ಹಾಗು ಕೊಪ್ಪದಲ್ಲಿ ಬ್ಯಾರಿ ಸಾಹಿತ್ಯ ಭವನಕ್ಕೆ ಪ್ರಯತ್ನ ಮಾಡಲಾಗುವುದು. ಚಿಕ್ಕಮಗಳೂರು ಜಿಲ್ಲಾ ಬ್ಯಾರಿ ಒಕ್ಕೂಟ ಹಾಗು ಎಲ್ಲಾ ತಾಲ್ಲೂಕಿನ ಬ್ಲಾಕ್ ಒಕ್ಕೂಟದ ಸರ್ವ ಸದಸ್ಯರ ಸಭೆ ಕರೆದು ಒಕ್ಕೂಟವನ್ನು ಪುನರ್ ರಚಿಸಲಾಗುವುದು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರಾಧ್ಯಕ್ಷ ಎಚ್.ಎಸ್.ಅಬ್ದುಲ್ ಖಾದರ್ ವಹಿಸಿದ್ದರು. ಕೊಪ್ಪ ಗ್ರಾಮಾಂತರ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಹಮೀದ್, ವಕ್ಫ್ ಬೋರ್ಡ್ ಸದಸ್ಯ ಕೆ.ಟಿ. ಮುಹಮ್ಮದ್, ತಾಲ್ಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಬದ್ರಿಯಾ ಮುಹಮ್ಮದ್, ಹುಮಾಯೂನ್ ಕಬೀರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕೆ. ಇದ್ದಿನಬ್ಬ ಬ್ಯಾರಿ ಪ್ರಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಝುಬೈರ್ ಅಹ್ಮದ್ ಸ್ವಾಗತಿಸಿ, ಬಿ. ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.