ಲಷ್ಕರ್, ಜೆಯುಡಿಗೆ ಮುಶರ್ರಫ್ ಸ್ನೇಹಹಸ್ತ

Update: 2017-12-17 17:28 GMT

ಕರಾಚಿ,ಡಿ.17: ಲಷ್ಕರ್ ಎ ತೊಯ್ಬಾ ಹಾಗೂ ಜಮೀಯತುದ್ದಾವಾ ಗುಂಪುಗಳು ‘ದೇಶಭಕ್ತ ಸಂಘಟನೆ’ಗಳೆಂದು ಪಾಕಿಸ್ತಾನದ ಮಾಜಿ ಸೇನಾ ಆಡಳಿತಗಾರ ಪರ್ವೇಝ್ ಮುಶರ್ರಫ್ ಹೇಳಿದ್ದು, ಪಾಕಿಸ್ತಾನದ ‘ಸುರಕ್ಷತೆ ಹಾಗೂ ಭದ್ರತೆ’ಯ ದೃಷ್ಟಿಯಿಂದ ತಾನು ಅವುಗಳೊಂದಿಗೆ ಮೈತ್ರಿಯೇರ್ಪಡಿಸಲು ಸಿದ್ಧನಿರುವುದಾಗಿ ಹೇಳಿದ್ದಾರೆ.

 ಪ್ರಸ್ತುತ ಸ್ವಯಂ ದೇಶಭ್ರಷ್ಟರಾಗಿ, ದುಬೈನಲ್ಲಿ ನೆಲೆಸಿರುವ 74 ವರ್ಷ ವಯಸ್ಸಿನ ಮುಶರ್ರಫ್, ಕಳೆದ ತಿಂಗಳು ಸಂದರ್ಶನವೊಂದರಲ್ಲಿ ತಾನೋರ್ವ ಲಷ್ಕರ್ ಎ ತೊಯ್ಬಾ ಹಾಗೂ ಅದರ ಸ್ಥಾಪಕ ಹಾಗೂ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರನೆನ್ನಲಾದ ಹಾಫೀಝ್ ಸಯೀದ್‌ನ ಅತಿ ದೊಡ್ಡ ಬೆಂಬಲಿಗನೆಂಬುದಾಗಿ ಹೇಳಿಕೊಂಡಿದ್ದರು.

‘‘ಲಷ್ಕರ್ ಎ ತೊಯ್ಬಾ ಹಾಗೂ ಜೆಯುಡಿಯವರು ಅತ್ಯಂತ ದೇಶಭಕ್ತರು. ಕಾಶ್ಮೀರದಲ್ಲಿ ಅವರು ಪಾಕಿಸ್ತಾನಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ ’’ ಎಂದು ಮುಶರ್ರಫ್ ಹೇಳಿರುವುದಾಗಿ ಎಆರ್‌ವೈ ಸುದ್ದಿವಾಹಿನಿ ವರದಿ ಮಾಡಿದೆ.

  ಈ ಎರಡು ಸಂಘಟನೆಗಳಿಗೆ ಭಾರೀ ಸಾರ್ವಜನಿಕ ಬೆಂಬಲವಿದೆ ಹಾಗೂ ಅವರು ಒಳ್ಳೆಯ ವ್ಯಕ್ತಿಗಳಾಗಿದ್ದಾರೆ. ಒಂದು ವೇಳೆ ಅವರು ರಾಜಕೀಯ ಪಕ್ಷವನ್ನು ಸ್ಥಾಪಿಸಿದಲ್ಲಿ ಯಾರೂ ಕೂಡಾ ಅದಕ್ಕೆ ವಿರೋಧ ವ್ಯಕ್ತಪಡಿಸಲಾರರು ಎಂದು ಮುಶರ್ರಫ್ ತಿಳಿಸಿದ್ದಾರೆ.

ಆದರೆ ಈ ಎರಡು ಗುಂಪುಗಳ ನಾಯಕರು ತನ್ನನ್ನು ಈವರೆಗೆ ಸಂಪರ್ಕಿಸಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಆದರೆ ಅವರು ತನ್ನ ಪಕ್ಷದ ಜೊತೆ ಮೈತ್ರಿಯೇರ್ಪಡಿಸಲು ಬಯಸಿದ್ದಲ್ಲಿ ತನ್ನ ಆಕ್ಷೇಪವಿಲ್ಲವೆಂದು ತಿಳಿಸಿದರು.

    ಸುಮಾರು 24 ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಸಮಾಲೋಚನಾ ಸಭೆಯನ್ನು ನಡೆಸಿದ ಬಳಿಕ ಫರ್ವೇಝ್ ಮುಶರ್ರಫ್ ಅವರು ಕಳೆದ ತಿಂಗಳು ತಾನು ಮಹಾ ಮೈತ್ರಿಕೂಟವೊಂದನ್ನು ರಚಿಸುವುದಾಗಿ ಘೋಷಿಸಿದ್ದರು.

2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 166 ಮಂದಿ ಮೃತಪಟ್ಟ ಘಟನೆಯ ಬಳಿಕ ಲಷ್ಕರ್ ಎ ತೊಯ್ಬಾ ಸಂಘಟನೆಯನ್ನು ನಿಷೇಧಿಸಲಾಗಿತ್ತು.2014 ಜೂನ್‌ನಲ್ಲಿ ಅಮೆರಿಕವು, ಜೆಯುಡಿಯನ್ನು ವಿದೇಶಿ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News