ಜೆರುಸಲೇಂ ಇಸ್ರೇಲ್ ರಾಜಧಾನಿ ಘೋಷಣೆಗೆ ವಿರೋಧ: ಜಕಾರ್ತದಲ್ಲಿ ಬೃಹತ್ ರ‍್ಯಾಲಿ

Update: 2017-12-17 17:34 GMT

ಜಕಾರ್ತ,ಡಿ.17: ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾನ್ಯತೆ ನೀಡಿರುವುದಕ್ಕೆ ಪ್ರತಿಭಟನೆಯಾಗಿ, ಅಮೆರಿಕದ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಮುಸ್ಲಿಮ್ ಧರ್ಮಗುರುಗಳು ರವಿವಾರ ಕರೆ ನೀಡಿದ್ದಾರೆ.

    ಶುಭ್ರ ಬಿಳಿ ಉಡುಪುಗಳನ್ನು ಧರಿಸಿದ್ದ ಸುಮಾರು 80 ಸಾವಿರ ಮಂದಿ ನಾಗರಿಕರು ಇಂಡೊನೇಶ್ಯದ ರಾಜಧಾನಿ ಜಕಾರ್ತದ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ‘ಫೆಲೆಸ್ತೀನ್‌ಗಾಗಿ ಇಂಡೊನೇಶ್ಯ ಒಗ್ಗಟ್ಟಾಗಿದೆ’ ಹಾಗೂ ‘ಫೆಲೆಸ್ತೀನ್ ರಕ್ಷಿಸಿ’ ಎಂಬ ಘೋಷಣೆಯ ಬ್ಯಾನರ್‌ಗಳನ್ನು ಅವರು ಹಿಡಿದಿದ್ದರು. ಇಂಡೊನೇಶ್ಯವು ವಿಶ್ವದಲ್ಲೇ ಅತ್ಯಧಿಕ ಮುಸ್ಲಿಂ ಜನಸಂಖ್ಯೆಯಿರುವ ರಾಷ್ಟ್ರವಾಗಿದೆ.

  ಜೆರುಸಲೇಂಗೆ ಇಸ್ರೇಲ್ ರಾಜಧಾನಿಯ ಮಾನ್ಯತೆ ನೀಡಿರುವುದನ್ನು ಹಿಂಪಡೆಯುವವರೆಗೂ ಇಂಡೊನೇಶ್ಯ ನಾಗರಿಕರು ಅಮೆರಿಕದ ಉತ್ಪನ್ನಗಳನ್ನು ಖರೀದಿಸಬಾರದೆಂದು ಆಗ್ರಹಿಸುವ ಪತ್ರವನ್ನು ಇಂಡೋನೇಶ್ಯದ ಉಲೇಮಾ ಮಂಡಳಿಯ ಉನ್ನತ ಧರ್ಮಗುರುವಾಗಿರುವ ಅನ್ವರ್ ಅಬ್ಬಾಸ್ ತಿಳಿಸಿದ್ದಾರೆ.

  ಅಮೆರಿಕದ ಉತ್ಪನ್ನಗಳನ್ನು ಅವಲಂಬಿಸದಿರಿ ಎಂದು ಅವರು ಘೋಷಿಸಿದಾಗ, ಪುರುಷರು, ಮಹಿಳೆಯರು, ಮಕ್ಕಳನ್ನು ಒಳಗೊಂಡ ಭಾರೀ ಜನಸ್ತೋಮವು ಇಂಡೊನೇಶ್ಯ ಹಾಗೂ ಫೆಲೆಸ್ತೀನ್ ಧ್ವಜಗಳನ್ನು ಬೀಸುತ್ತಾ ಒಕ್ಕೊರಲಿನಿಂದ ಪ್ರತಿಕ್ರಿಯಿಸಿ ‘ ಬಹಿಷ್ಕರಿಸುವ’ ಎಂದು ಘೋಷಣೆಗಳನ್ನು ಕೂಗಿದರು.

  ಪ್ರತಿಭಟನಕಾರರು ಜಕಾರ್ತದ ರಾಷ್ಟ್ರೀಯ ಸ್ಮಾರಕ ಪಾರ್ಕ್‌ನಿಂದ ಅಮೆರಿಕದ ರಾಯಭಾರಿ ಕಚೇರಿಯವರೆಗೆ ಸುಮಾರು 3 ಕಿ.ಮೀ.ನಷ್ಟು ಶಾಂತಿಯುತವಾಗಿ ಪಾದಯಾತ್ರೆ ನಡೆಸಿದರು. ರ್ಯಾಲಿಯಲ್ಲಿ ಶಾಂತಿ ಹಾಗೂ ಶಿಸ್ತು ಕಾಪಾಡಲು ಸುಮಾರು 20 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News