ಕೀಳಿಂಜೆಯಲ್ಲಿ ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ

Update: 2017-12-18 15:15 GMT

ಬ್ರಹ್ಮಾವರ, ಡಿ.18: ಹಾವಂಜೆ ಗ್ರಾಮದ ಕೀಳಿಂಜೆ ಸಮೀಪ ಸರಕಾರದ ವತಿಯಿಂದ ಅಭಿವೃದ್ಧಿಗೊಳ್ಳುತ್ತಿರುವ ಮದ್ಮಲ್ ಕೆರೆಯ ಪಕ್ಕದ ಕೊರಗ ಆಚಾರ್ಯರ ಗದ್ದೆಯಲ್ಲಿ ವಿಜಯನಗರ ಕಾಲ ಶಿಲಾ ಶಾಸನವೊಂದು ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಶಿರ್ವದ ಮುಲ್ಕಿ ಸುಂದರಾಂ ಶೆಟ್ಟಿ ಪದವಿ ಕಾಲೇಜಿನ ಪುರಾತತ್ವ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.ಟಿ.ಮುರುಗೇಶ್ ಶಿಲಾ ಶಾಸನದ ಲಿಪಿ ಅಚ್ಚು ತೆಗೆಯುವ ಕಾರ್ಯ ನಡೆಸಿದ್ದಾರೆ.

ಶಾಸನದ ನಾಲ್ಕೂ ಬದಿಯಲ್ಲಿರುವ ಹಳೆಗನ್ನಡ ಬರವಣಿಗೆ ರೂಪದಲ್ಲಿದ್ದ ಲಿಪಿಯನ್ನು ಅಚ್ಚು ಮಾಡಲಾಯಿತು. ಶಿಲಾಶಾಸನವು ನಾಲ್ಕುವರೆ ಅಡಿ ಎತ್ತರವಿದ್ದು ಸ್ಪಷ್ಟ ಬರವಣಿಗೆ ಮೇಲಿನಿಂದ ಅಡಿಪಾಯದವರೆಗೂ ಕಂಡು ಬರುತ್ತಿದೆ. ಪ್ರೊ.ಮುರುಗೇಶಿ ಅವರೊಂದಿಗೆ ನಿವೃತ್ತ ಅಧ್ಯಾಪಕರು, ಇತಿಹಾಸ ಸಂಶೋಧನಾ ಆಸಕ್ತರೂ ಆದ ಶ್ರೀಧರ ಭಟ್, ಸಂಶೋಧನಾ ವಿದ್ಯಾರ್ಥಿ ಸುಹಾಸ್ ನಾಯಕ್, ಮೆಲ್ವಿನ್ ಕೊಳಲಗಿರಿ ಜೊತೆಗಿದ್ದರು.

ಸ್ಥಳೀಯರಾದ ಜಯಶೆಟ್ಟಿ ಬನ್ನಂಜೆ, ಸಾಧು ಪೂಜಾರಿ ಕೀಳಿಂಜೆ, ಗಣೇಶ್ ರಾಜ್ ಸರಳೇಬೆಟ್ಟು, ಕೃಷ್ಣ ಶೆಟ್ಟಿ, ಕಾಡ್ಯ ಶೆಟ್ಟಿ, ನಾರಾಯಣ ಪೂಜಾರಿ, ವಾಲ್ಟರ್ ಡಿಸೋಜ ಕೊಳಲಗಿರಿ, ಸೈಮಂಡ್ ಡಿಸೋಜ, ಪಿಂಕಿ ಅಲ್ಮೇಡ ಮೊದಲಾ ದವರು ಶಿಲಾಶಾಸನದ ಲಿಪಿ ಅಚ್ಚು ಪ್ರಕ್ರಿಯೆಯಲ್ಲಿ ಸಹಕರಿಸಿದರು. ಇತ್ತೀಚೆಗೆ ಬೆಳ್ಳಂಪಳ್ಳಿ ಹಾಗೂ ಪೆರ್ಡೂರಿನ ಸುತ್ತಮುತ್ತ ಶಿಲಾಶಾಸನಗಳು ಪತ್ತೆಯಾಗಿದ್ದು ಈ ಶಾಸನಗಳ ಲಿಪಿ ಅಚ್ಚು ಪ್ರಕ್ರಿಯೆ ಇನ್ನಷ್ಟೇ ನಡೆಯ ಬೇಕಾಗಿದೆ. ಇದರಿಂದ ತುಳುನಾಡಿನ ಇತಿಹಾಸದ ಕುರಿತು ಹಾಗೂ ಅಂದಿನ ಜನಜೀವನದ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗುವ ಸಾಧ್ಯತೆ ಇದೆ ಎಂದು ಸಾಮಾಜಿಕಕಾರ್ಯಕರ್ತ ಗಣೇಶ್ ರಾಜ ಸರಳೇಬೆಟ್ಟು ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News