ಅಂಬ್ಲಮೊಗರು ಗ್ರಾ.ಪಂ. ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟನೆ
ಉಳ್ಳಾಲ, ಡಿ.18: ಗ್ರಾಮ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯೊಂದಿಗೆ ಮಾದರಿಯಾಗಬೇಕಾದರೆ ಗ್ರಾಮಸ್ಥರ ಸಹಕಾರ ಮುಖ್ಯ ಎಂದು ಆಹಾರ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅಂಬ್ಲಮೊಗರು ಗ್ರಾಮ ಪಂಚಾಯಿತಿ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ, ಐದು ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಸೋಮವಾರ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬ್ಲಮೊಗರು ನ್ಯೂಪಡ್ಪು ಮುಖ್ಯ ರಸ್ತೆ ಅಭಿವೃದ್ಧಿಗೆ 3.50 ಕೋಟಿ ಬಿಡುಗಡೆಗೊಳಿಸಲಾಗಿದೆ. ಅಡ್ಡರಸ್ತೆಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದ್ದು, ನಗರ ಪ್ರದೇಶಗಳಲ್ಲಿರುವ ವ್ಯವಸ್ಥೆ ಅಂಬ್ಲಮೊಗರುವಿನಲ್ಲೂ ಇರಬೇಕು ಎನ್ನುವುದು ತಮ್ಮ ಅಭಿಲಾಷೆ. ಕ್ಷೇತ್ರದಲ್ಲಿ 15 ಸಾವಿರ ಬಡವರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಹೇಳಿದರು.
ವಿದಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮ ಪಂಚಾಯಿತಿಗೆ ಆದಾಯ ಬರಬೇಕಾದರೆ ಮೊಬೈಲ್ ಟವರ್‌ಗಳಿಗೆ 15ರಿಂದ 20ನಸಾವಿರ ತೆರಿಗೆ ವಿಧಿಸಬೇಕಿದ್ದರೂ ಕಂಪನಿಯವರು ನ್ಯಾಯಾಲಯದ ಹೆಸರಲ್ಲಿ ಯಾವುದೋ ಆಂಗ್ಲಪತ್ರ ತೋರಿಸುತ್ತಾರೆ. ಆದರೆ ತೆರಿಗೆ ಇಲ್ಲ ಎನ್ನುವ ಪದ್ದತಿ ಕಾಯ್ದೆ ತಿದ್ದುಪಡಿ ಬಳಿಕ ಹೋಗಿರುವುದು ಎಲ್ಲರೂ ತಿಳಿದಿರಬೇಕು. ಎಷ್ಟು ತೆರಿಗೆ ವಿಧಿಸಬೇಕು ಎನ್ನುವುದನ್ನು ಗ್ರಾಮಸಭೆಗಳಲ್ಲಿ ನಿರ್ಣಯಿಸಬೇಕು ಎಂದರು.
ತಾಲೂಕು ಪಂ. ಅಧ್ಯಕ್ಷ ಮಹಮ್ಮದ್ ಮೋನು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ಶಶಿಪ್ರಭಾ ಶೆಟ್ಟಿ, ಕಾರ್ಯನಿರ್ವಾಹಕ ಅಧಿಕಾರಿ ಸದಾನಂದ, ಪ್ರೊಬೆಷನರಿ ಪ್ರೊ.ಜ್ಞಾನೇಂದ್ರ, ಭೂನ್ಯಾಯ ಮಂಡಳಿ ಸದಸ್ಯ ಸುದರ್ಶನ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೀತಾರಾಮ ಸಾಲ್ಯಾನ್, ಕೋಟ್ರಗುತ್ತು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಮೊಕ್ತೇಸರ ಪದ್ಮನಾಭ ರೈ, ಕುಂಡೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಸ್ವಾಗತ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಗ್ರಾ.ಪಂ. ಅಧ್ಯಕ್ಷ ಎಸ್.ಮಹಮ್ಮದ್ ರಫೀಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಓ ಕೃಷ್ಣ ನಾಯಕ್ ವಂದಿಸಿದರು.