'ಈದ್ಗಾ ನಮಾಝ್ ಸ್ಥಳವನ್ನು ಖಾಸಗಿ ವಸತಿಗೃಹದ ರಸ್ತೆಗೆ ಬಳಸಲು ಯತ್ನ'
ಮಂಗಳೂರು, ಡಿ.18: ನಗರದ ಬಾವುಟಗುಡ್ಡ ಬಳಿಯಿರುವ ಈದ್ಗಾ ಮಸೀದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತೀ ವರ್ಷ ಈದ್ ಮತ್ತು ಬಕ್ರೀದ್ ಸಂದರ್ಭ ಈದ್ ನಮಾಝ್ ನಡೆಸಲಾಗುತ್ತುದೆ. ಈ ಸ್ಥಳವನ್ನು ಸ್ಥಳೀಯ ವಸತಿ ಗೃಹದ ಮಾಲಕರೊಬ್ಬರು ನಿಗದಿತ ರಸ್ತೆ ಅಗಲೀಕರಣದ ಬದಲು ಹೆಚ್ಚುವರಿಯಾಗಿ ಸುಮಾರು 8 ಅಡಿ ಒತ್ತುವರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.
ಸೋಮವಾರ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಈದ್ಗಾ ಮಸೀದಿ ಬಳಿ ಜಮಾಯಿಸಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯ ಕಾರ್ಪೊರೇಟರ್ ಎ.ಸಿ.ವಿನಯರಾಜ್‌ಗೆ ಒಕ್ಕೂಟದ ಮುಖಂಡರು ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟರು.
ಒಕ್ಕೂಟದ ಆಕ್ಷೇಪವನ್ನು ಆಲಿಸಿದ ಕಾರ್ಪ್ರೋಟರ್ ವಿನಯರಾಜ್ ಸಮಸ್ಯೆಯನ್ನು 2 ದಿನದೊಳಗೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈದ್ ನಮಾಝ್‌ನ ಸ್ಥಳವನ್ನು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಧಾರ್ಮಿಕ ಆಚರಣೆಗೆ ಧಕ್ಕೆ ತಂದರೆ ತೀವ್ರ ಹೋರಾಟ ಮಾಡುವುದಾಗಿ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಎಚ್ಚರಿಸಿದ್ದಾರೆ.
ಈ ಸಂದರ್ಭ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಾಜಿ ಹನೀಫ್ ಮತ್ತಿತರರು ಉಪಸ್ಥಿತರಿದ್ದರು.