ರಾಹುಲ್ ಗಾಂಧಿಗೆ ಶಿವಸೇನೆ ಪ್ರಶಂಸೆ

Update: 2017-12-18 16:15 GMT

 ಮುಂಬೈ, ಡಿ. 18: ಫಲಿತಾಂಶದ ಬಗ್ಗೆ ಚಿಂತಿಸದೆ ಗುಜರಾತ್ ಚುನಾವಣಾ ಯುದ್ಧದಲ್ಲಿ ಹೋರಾಡಿದ ಕಾಂಗ್ರೆಸ್‌ನ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಶಿವಸೇನೆ ಪ್ರಶಂಸಿಸಿದೆ. 47ರ ಹರೆಯದ ರಾಹುಲ್ ಗಾಂಧಿ ನಿರ್ಣಾಯಕ ಹಂತದಲ್ಲಿ ಹಳೆಯ ಪಕ್ಷದ ಅಧಿಕಾರವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಅದು ಹೇಳಿದೆ.

ನಿರ್ಣಾಯಕ ಹಂತದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಸ್ವೀಕರಿಸಿದ್ದಾರೆ. ಅವರಿಗೆ ಶುಭ ಹಾರೈಸುವುದರಲ್ಲಿ ಯಾವುದೇ ಆಕ್ಷೇಪ ಇರಬಾರದು ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ.ಕಾಂಗ್ರೆಸ್ ಪಕ್ಷವನ್ನು ಯಶಸ್ಸಿನ ಪರಾಕಾಷ್ಠೆಗೆ ಕೊಂಡೊಯ್ಯುವುದು ಅಥವಾ ಕೆಳಗೆ ಬೀಳಿಸುವುದನ್ನು ರಾಹುಲ್ ಗಾಂಧಿ ಅವರೇ ನಿರ್ಧರಿಸಬೇಕು ಎಂದು ಸಾಮ್ನಾ ಹೇಳಿದೆ. ಗುಜರಾತ್ ಚುನಾವಣೆಯ ಅಂತಿಮ ಫಲಿತಾಂಶದ ಬಗ್ಗೆ ಚಿಂತಿಸದೆ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರಕ್ಕೆ ಧುಮುಕಿದರು ಎಂದು ಅದು ಹೇಳಿದೆ.

ಸೋಲುವ ಭಯದಿಂದ ಬಿಜೆಪಿ ನಾಯಕರ ಮುಖ ಕಪ್ಪಿಟ್ಟುಕೊಂಡಿತ್ತು. ಆದರೆ, ರಾಹುಲ್ ಗಾಂಧಿ ಫಲಿತಾಂಶದ ಬಗ್ಗೆ ಚಿಂತಿಸದೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡರು. ಆತ್ಮಸ್ಥೈರ್ಯವೇ ಅವರನ್ನು ಮುಂದಕ್ಕೆ ಕರೆದೊಯ್ದಿತು ಎಂದು ಅದು ಹೇಳಿದೆ. ಮೋದಿ ನೇತೃತ್ವದ ಸರಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶಿವಸೇನೆ, ಕಳೆದ 60 ವರ್ಷಗಳಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಕಳೆದ ಮೂರು ವರ್ಷಗಳಿಂದ ಮಾತ್ರ ಭಾರತ ಅಭಿವೃದ್ಧಿ ಆಗಿದೆ ಎಂದು ಯಾರಾದರೂ ಭಾವಿಸಲು ಸಾಧ್ಯವೇ ? ಇದು ಮೂರ್ಖತನದ ಪರಮಾವಧಿ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News