ಕುಸಿದ ಬಿಜೆಪಿ ಮತಗಳಿಕೆ ಪ್ರಮಾಣ

Update: 2017-12-18 16:19 GMT

ಹೊಸದಿಲ್ಲಿ,ಡಿ.18: 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಶೇ.60ರಷ್ಟಿತ್ತಾದರೂ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅದು ಗಣನೀಯ ಕುಸಿತವನ್ನು ಕಂಡಿದೆ. ಇದೇ ವೇಳೆ ಕಾಂಗ್ರೆಸ್ ತನ್ನ ಮತಗಳಿಕೆಯ ಶೇಕಡಾವಾರು ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿದೆ.

ಸೋಮವಾರ ಚುನಾವಣಾ ಆಯೋಗವು ಪ್ರಕಟಿಸಿದ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶಗಳಂತೆ ಬಿಜೆಪಿಯು ಸರಿಸುಮಾರು ಶೇ.49.1 ಮತಗಳನ್ನು ಗಳಿಸಿದ್ದು, 2014ರ ಚುನಾವಣೆಯ ಶೇ.60ಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ. ಆದರೆ 2012ರ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ್ದ ಸುಮಾರು ಶೇ.48 ಮತಗಳಿಗಿಂತ ಹೆಚ್ಚಾಗಿದೆ.

ಇನ್ನೊಂದೆಡೆ 2014ರ ಲೋಕಸಭಾ ಚುನಾವಣೆಯಲ್ಲಿ ಶೇ.33ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್‌ನ ಪಾಲು ಈ ಚುನಾವಣೆಯಲ್ಲಿ ಶೇ.41.4ಕ್ಕೇರಿದೆ. ಇದು 2012ರ ವಿಧಾನಸಭಾ ಚುನಾವಣೆಯಲ್ಲಿ ಅದಕ್ಕೆ ಬಿದ್ದಿದ್ದ ಶೇ.39 ಮತಗಳಿಗಿಂತ ಅಧಿಕವಾಗಿದೆ. ರಾಜ್ಯದಲ್ಲಿ 2007ರ ವಿಧಾನಸಭಾ ಚುನಾವಣೆಯ ಬಳಿಕ ಉಭಯ ಪಕ್ಷಗಳ ನಡುವಿನ ಮತಗಳಿಕೆ ಪ್ರಮಾಣದಲ್ಲಿಯ ಅಂತರ ಕುಗ್ಗುತ್ತಾ ಬಂದಿದ್ದು, ಈ ಸಲದ ಚುನಾವಣೆಯಲ್ಲಿ ಈ ಅಂತರ ಸುಮಾರು ಶೇ.7.7ರಷ್ಟಿದೆ.

2007ರಲ್ಲಿ ಬಿಜೆಪಿಯು ಶೇ.49ರಷ್ಟು ಮತ್ತು ಕಾಂಗ್ರೆಸ್ ಶೇ.39.63 ಮತಗಳನ್ನು ಗಳಿಸಿದ್ದು, ಮತಹಂಚಿಕೆಯಲ್ಲಿನ ವ್ಯತ್ಯಾಸ ಶೇ.9.49ರಷ್ಟಿತ್ತು. 2002ರ ದಂಗೆಗಳ ಬೆನ್ನಿಗೇ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಈ ಅಂತರ ಶೇ.10.4 ಆಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳ ಮತಗಳಿಕೆಯ ಅಂತರ ಶೇ.30ಕ್ಕೆ ಹೆಚ್ಚಿದ್ದು, ಬಿಜೆಪಿ ರಾಜ್ಯದಲ್ಲಿಯ ಎಲ್ಲ ಸ್ಥಾನಗಳನ್ನು ಗೆದ್ದಿತ್ತು. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಾಧನೆಯನ್ನು ಉತ್ತಮಗೊಳಿಸಿದ್ದು, 2012ರ ವಿಧಾನಸಭಾ ಚುನಾವಣೆ ಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ.

 ಪಕ್ಷೇತರರು ಶೇ.4.3ರಷ್ಟು ಮತಗಳನ್ನು ಪಡೆದಿದ್ದರೆ, ಶೇ.1.8 ಮತಗಳು ನೋಟಾ ಪಾಲಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪಕ್ಷವು ಶೇ.1ರಷ್ಟೂ ಮತಗಳನ್ನು ಗಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News