ಬೆಳ್ತಂಗಡಿ ಬಿ.ಕೆ.ದೇವರಾಜ್‌ಗೆ ಬಿ.ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ

Update: 2017-12-18 17:00 GMT

ಕುಂದಾಪುರ, ಡಿ.18: ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2017ನೇ ಸಾಲಿನ ಕೃಷಿ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬಿ.ಕೆ.ದೇವರಾಜ್ ಅಮೈಮನೆ ಆಯ್ಕೆಯಾಗಿದ್ದಾರೆ.

ಅಪ್ಪಟ ಕೃಷಿಕರಾಗಿರುವ ಇವರು ಭತ್ತದ ಕೃಷಿಯಲ್ಲಿ ಹೆಚ್ಚಿನ ಪರಿಣಿತಿ ಹಾಗೂ ಆನಂದವನ್ನು ಕಂಡುಕೊಂಡಿದ್ದಾರೆ. ಕರಾವಳಿಯ ಹೆಚ್ಚಿನ ಕೃಷಿಕರು ಭತ್ತದಿಂದ ವಿಮುಖರಾಗಿ ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗುತಿದ್ದರೆ ದೇವರಾಜ್ ಈಗಲೂ ಭತ್ತವನ್ನೇ ನಂಬಿದ್ದಾರೆ. ಹಳ್ಳಿಗಳಲ್ಲಿರುವ ನಾಟಿ ತಳಿಗಳನ್ನು ಬೆಳೆಸಿ ವೈವಿಧ್ಯತೆಯನ್ನು ಮೆರೆಯುತಿದ್ದಾರೆ. ಪ್ರಸ್ತುತ 154 ವೈವಿಧ್ಯಮಯ ತಳಿಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಪ್ರತಿವರ್ಷ ಎರಡು ಬೆಳೆಯಲ್ಲಿ ಬೆಳೆಸುತಿದ್ದಾರೆ.
ಇದರೊಂದಿಗೆ 40ಕ್ಕೂ ಮಿಕ್ಕಿ ವೈವಿಧ್ಯಮಯ ತರಕಾರಿಗಳನ್ನು, 80ಕ್ಕೂ ಮಿಕ್ಕಿ ನಾಟಿ ತಳಿಯ ಮಾವಿನಹಣ್ಣು ಹಾಗೂ 50ಕ್ಕೂ ಮಿಕ್ಕಿ ವಿಶಿಷ್ಟ ಬಗೆಯ ಹಲಸಿನ ಮರಗಳನ್ನು ಪೋಷಿಸಿಕೊಂಡು ಬರುತಿದ್ದಾರೆ. ಇವರು ಈಗಲೂ ಕೃಷಿಗೆ ಯಾವುದೇ ರಾಸಾಯನಿಕ ಹಾಗೂ ಕ್ರಿಮಿನಾಶಕಗಳನ್ನು ಬಳಸದೇ, ತಮ್ಮಲ್ಲಿರುವ ಹಟ್ಟಿಗೊಬ್ಬರದಿಂದಲೇ ಎಲ್ಲವನ್ನು ಪೋಷಿಸುತಿದ್ದಾರೆ.

73ರ ಹರೆಯ ಉತ್ಸಾಹಿ, ನಿರಾಡಂಬರ ವ್ಯಕ್ತಿತ್ವದ ಕೃಷಿಕ ಬಿ.ಕೆ.ದೇವರಾವ್ ಇವರಿಗೆ ಡಿ.24ರಂದು ಬಸ್ರೂರು ಶಾರದಾ ಕಾಲೇಜಿನಲ್ಲಿ ನಡೆಯುವ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ 83ನೇ ಹುಟ್ಟುಹಬ್ಬದಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕಂಬದಕೋಣೆ ಆರ್. ಸಂಜೀವರಾವ್ ಎಜುಕೇಶನಲ್ ಎಂಡ್ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷ ಕೆ.ಎಸ್.ಪ್ರಕಾಶ್ ರಾವ್ ವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಅದ್ಯಕ್ಷ ಬಿ. ರಾಮಕಿಶನ್ ಹೆಗ್ಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News