ಹಂಚು ಉದ್ಧಿಮೆ ಬಿಕ್ಕಟ್ಟಿಗೆ ಸರಕಾರ ಕಾರಣ: ಬಾಲಕೃಷ್ಣ ಶೆಟ್ಟಿ

Update: 2017-12-18 17:15 GMT

ಕುಂದಾಪುರ, ಡಿ.17: ಪುರಾತನ ಕೈಗಾರಿಕೆಯಾಗಿರುವ ಹಂಚು ಉದ್ದಿಮೆ ಇಂದು ಬಿಕ್ಕಟ್ಟಿನಲ್ಲಿದೆ. ಕಾರ್ಖಾನೆಯ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವ ಭೀತಿ ಎದುರಿಸುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರದ ಜನಪ್ರತಿನಿಧಿಗಳಿಗೆ ನಾಡ ಕೈಗಾರಿಕೆ ಉಳಿಸುವ ಯಾವುದೇ ಕಾಳಜಿ ಇಲ್ಲ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕುಂದಾಪುರ ಹಂಚು ಕಾರ್ಮಿಕ ಭವನದಲ್ಲಿ ರವಿವಾರ ಜರಗಿದ ಸಂಘದ 17ನೆ ಮಹಾಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಹಂಚು ತಯಾರಿಕೆಗೆ ಬೇಕಾಗಿರುವ ಆವೆ ಮಣ್ಣು, ಕಟ್ಟಿಗೆ ಅಭಾವ, ಮಾರುಕಟ್ಟೆ ಯಲ್ಲಿ ಹಂಚಿನ ಬೇಡಿಕೆ ಕುಸಿತವಾಗುವ ಪರಿಸ್ಥಿತಿಯನ್ನು ಸರಕಾರ ಸೃಷ್ಠಿಸಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಸರಕಾರ ಮದ್ಯ ಪ್ರವೇಶಿಸಿ ಪರಿಹರಿಸುವ ಪ್ರಯತ್ನ ಮಾಡಿಲ್ಲ. ಕಳೆದ 2 ವರ್ಷಗಳಿಂದೀಚೆಗೆ 3 ಹೆಂಚು ಕಾರ್ಖಾನೆಗಳು ಮುಚ್ಚಿದ್ದು, 300 ಕುಟುಂಬಗಳು ಅತಂತ್ರರಾಗಿದ್ದಾರೆ ಎಂದರು.

ಶಾಸಕರ ವೇತನ, ಪಿಂಚಣಿ ಹೆಚ್ಚಳ ಮಾಡಿರುವ ಸರಕಾರ, ಹೆಂಚು ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡದೇ ದ್ರೋಹ ಮಾಡಿದೆ ಎಂದ ಅವರು, ಕೋಮುವಾದವು ದುಡಿಯುವ ಜನರನ್ನು ಒಡೆಯುತ್ತಿದೆ. ದ್ವೇಷ ಹೆಚ್ಚುತ್ತಿದೆ. ಇದರಿಂದಾಗಿ ಕಾರ್ಮಿಕರ ಸಂಕಷ್ಟಗಳು ಗೌಣವಾಗಿ ಮಾಡಲಾಗು ತ್ತಿದೆ ಎಂದು ಟೀಕಿಸಿದರು.

ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿ.ನರಸಿಂಹ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರಕಾ್ ಕೋಣಿ ಲೆಕ್ಕಪತ್ರ ಮಂಡಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ವಿ.ನರಸಿಂಹ, ಕಾರ್ಯದರ್ಶಿಯಾಗಿ ಎಚ್. ನರಸಿಂಹ, ಕೋಶಾಧಿಕಾರಿಯಾಗಿ ಪ್ರಕಾಶ್ ಕೋಣಿ ಅವರನ್ನು ಪುನರಾಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಮುಖಂಡರಾದ ಜಿ.ಡಿಪಂಜು, ಲಕ್ಷ್ಮಣ ಡಿ., ಗೋಪಾಲ ಕಾಗೇರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News