ಮ್ಯಾನ್ಮಾರ್‌ನಲ್ಲಿ 40 ರೊಹಿಂಗ್ಯಾ ಗ್ರಾಮಗಳಿಗೆ ಬೆಂಕಿ: ವರದಿ

Update: 2017-12-18 18:17 GMT

ರಖೈನ್ (ಮ್ಯಾನ್ಮಾರ್), ಡಿ.18: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರು ವಾಸವಿದ್ದ 40 ಗ್ರಾಮಗಳಿಗೆ ಸೇನಾ ಕಾರ್ಯಾಚರಣೆ ನಡೆಸಿ ಬೆಂಕಿ ಹಚ್ಚಲಾಗಿದ್ದು, ಇದರಿಂದ 6,55,000 ರೊಹಿಂಗ್ಯಾ ಮುಸ್ಲಿಮರು ಪಕ್ಕದ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ಮಾನವ ಹಕ್ಕುಗಳ ವೀಕ್ಷಣ ಸಂಸ್ಥೆ (ಎಚ್‌ಆರ್‌ಡಬ್ಯೂ) ಸೋಮವಾರ ವರದಿ ಮಾಡಿದೆ.

ಕಳೆದ ಆಗಸ್ಟ್ 25ರಂದು ಆರಂಭವಾದ ಸೇನಾ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ ರೊಹಿಂಗ್ಯಾಗಳು ವಾಸವಿರುವ 354 ಹಳ್ಳಿಗಳನ್ನು ಸಂಪೂರ್ಣ ಅಥವಾ ಭಾಗಶಃ ಸುಟ್ಟು ಹಾಕಲಾಗಿದೆ ಎಂದು ಅಕ್ಟೋಬರ್ ಮತ್ತು ನವೆಂಬರ್ ಮಧ್ಯೆ ತೆಗೆದಂತಹ ಉಪಗ್ರಹ ಚಿತ್ರಗಳ ಆಧಾರದಲ್ಲಿ ಎಚ್‌ಆರ್‌ಡಬ್ಯೂ ತಿಳಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಗಡಿದಾಟಿದ ಸಾವಿರಾರು ರೊಹಿಂಗ್ಯಾ ನಿರಾಶ್ರಿತರ ವಾಪಸಾತಿಯನ್ನು ಆರಂಭಿಸಲು ನವೆಂಬರ್ 23ರಂದು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಸರಕಾರಗಳು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಅದೇ ವಾರದಲ್ಲಿ ಕೆಲವು ಗ್ರಾಮಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಎಚ್‌ಆರ್‌ಡಬ್ಲ್ಯೂ ತಿಳಿಸಿದೆ.

ರೊಹಿಂಗ್ಯಾಗಳ ಗ್ರಾಮಗಳನ್ನು ಧ್ವಂಸಗೊಳಿಸುತ್ತಿರುವ ಪ್ರಕ್ರಿಯೆಯು ನಿರಾಶ್ರಿತರ ಸುರಕ್ಷಿತ ವಾಪಸಾತಿಯ ಬದ್ಧತೆಗಾಗಿ ಮಾಡಿರುವ ಒಪ್ಪಂದಕ್ಕೆ ಕೇವಲ ಸಾರ್ವಜನಿಕರ ಮುಂದೆ ತೋರ್ಪಡಿಕೆಗಾಗಿ ಸಹಿ ಹಾಕಲಾಗಿದೆ ಎಂದು ಎಚ್‌ಆರ್‌ಡಬ್ಲ್ಯೂ ಏಷ್ಯಾ ನಿರ್ದೇಶಕ ಬ್ರಾಡ್ ಆಡಮ್ಸ್ ತಿಳಿಸಿದ್ದಾರೆ.

ಅಷ್ಟೇನೂ ಶಸ್ತ್ರಾಸ್ತ್ರ ಹೊಂದದ ರೊಹಿಂಗ್ಯಾ ಬಂಡುಕೋರ ಗುಂಪುಗಳು ಮ್ಯಾನ್ಮಾರ್ ಸೇನಾಪಡೆಯ ಮೇಲೆ ದಾಳಿ ನಡೆಸಿ ಹನ್ನೊಂದು ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದ ನಂತರ ನಡೆದ ಸೇನಾ ಕಾರ್ಯಾಚರಣೆಯ ವೇಳೆ ಮ್ಯಾನ್ಮಾರ್ ಸೇನೆಯು ಹತ್ಯೆ, ಅತ್ಯಾಚಾರ ಮತ್ತು ಇತರ ದೌರ್ಜನ್ಯಗಳನ್ನು ನಡೆಸಿದೆ ಎಂದು ಎಚ್‌ಆರ್‌ಡಬ್ಯೂ ಆರೋಪಿಸಿದೆ.

ಲಾಭರಹಿತ ಸಂಸ್ಥೆ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ವರದಿ ಮಾಡಿರುವಂತೆ ಕಳೆದ ಆಗಸ್ಟ್‌ನಿಂದ ಹಿಂಸಾಚಾರದಲ್ಲಿ 6,700 ರೊಹಿಂಗ್ಯಾಗಳು ಸಾವನ್ನಪ್ಪಿದ್ದಾರೆ. ಮ್ಯಾನ್ಮಾರ್ ರೊಹಿಂಗ್ಯಾಗಳನ್ನು ಪ್ರಜೆಗಳೆಂದು ಒಪ್ಪುವುದಿಲ್ಲ. ಅವರನ್ನು ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂದು ಪರಿಗಣಿಸುವ ಮ್ಯಾನ್ಮಾರ್ ರೊಹಿಂಗ್ಯಾಗಳ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News