ದಕ್ಷಿಣ ಏಷ್ಯಾದಲ್ಲಿ ಪರಮಾಣು ಯುದ್ಧದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ: ಪಾಕ್ ಭದ್ರತಾ ಸಲಹೆಗಾರ

Update: 2017-12-18 17:48 GMT

ಇಸ್ಲಾಮಾಬಾದ್, ಡಿ.18: ದಕ್ಷಿಣ ಏಷ್ಯಾ ಪ್ರದೇಶದ ಸ್ಥಿರತೆಯು ಅತ್ಯಂತ ನಾಜೂಕಾದ ಸಮತೋಲನದಲ್ಲಿ ನೇತಾಡುತ್ತಿದ್ದು ಈ ಭಾಗದಲ್ಲಿ ಪರಮಾಣು ಯುದ್ಧದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪಾಕಿಸ್ತಾನದ ಭದ್ರತಾ ಸಲಹೆಗಾರರಾದ ನಿವೃತ್ತ ಲೆಫ್ಟಿನೆಂಟ್ ಜನರಲ್‌ನಾಸೀರ್ ಖಾನ್ ಜಾಂಜುವಾ ತಿಳಿಸಿದ್ದಾರೆ.

ಅಮೆರಿಕಾವು ಭಾರತದ ಜೊತೆ ಸೇರಿಕೊಂಡು ಹಲವು ಬಿಲಿಯನ್ ಡಾಲರ್ ವೆಚ್ಚದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ರಾಷ್ಟ್ರೀಯ ಭದ್ರತಾ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಸಿದ ಜಂಜುವಾ ಭಾರತವು ನಿರಂತರವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಶೇಖರಿಸುತ್ತಿದ್ದು, ಪಾಕಿಸ್ತಾನವನ್ನು ಬೆದರಿಸುತ್ತಿದೆ ಎಂದು ಹೇಳಿದರು. ಈ ಪ್ರದೇಶದಲ್ಲಿ ಅಮೆರಿಕಾ ಪಡೆಗಳ ಬೆಂಬಲದಿಂದಾಗಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ ಎಂದವರು ಆರೋಪಿಸಿದ್ದಾರೆ.ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗಟ್ಟಿಯಾಗಿ ಬೆಳೆಯುತ್ತಿದ್ದಂತೆ ಅಮೆರಿಕವು ತನ್ನ ವೈಫಲ್ಯವನ್ನು ಪಾಕಿಸ್ತಾನದ ಮೇಲೆ ಹಾಕಲು ಆರಂಭಿಸಿತು ಎಂದು ಜಂಜುವಾ ತಿಳಿಸಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಚೀನಾದ ಪ್ರಾಬಲ್ಯವನ್ನು ಕಡಿಮೆ ಮಾಡುವ ತನ್ನ ನೀತಿಯ ಭಾಗವಾಗಿ ಅಮೆರಿಕವು ಭಾರತದ ಜೊತೆ ಸೇರಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದವರು ಆರೋಪಿಸಿದ್ದಾರೆ. ಅಮೆರಿಕವು ಭಾರತಕ್ಕೆ ಅಫ್ಘಾನಿಸ್ತಾನದ ರಾಜಕೀಯ ಪ್ರಕ್ರಿಯೆಯಲ್ಲಿ ಪಾತ್ರವಹಿಸುವ ಅಧಿಕಾರ ನೀಡಿ ಇಸ್ಲಾಮಾಬಾದ್ ಬದಲು ಹೊಸದಿಲ್ಲಿಗೆ ಪ್ರಾಶಸ್ತ್ಯವನ್ನು ನೀಡಿದೆ ಎಂದು ತಿಳಿಸಿದ ಜಂಜುವಾ ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ಅಮೆರಿಕಾ ನೇತೃತ್ವದ ಪಡೆಗಳ ಕಾರ್ಯಾಚರಣೆಯಲ್ಲಿ ಬೆಂಬಲ ನೀಡಿದ ನಂತರವೇ ಭಯೋತ್ಪಾದನೆಯ ತೊಂದರೆಯನ್ನು ಅನುಭವಿಸುವಂತಾಯಿತು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News