‘ವಾನ್ನಾಕ್ರೈ’ ಸೈಬರ್ ದಾಳಿ ನಡೆಸಿದ್ದು ಉತ್ತರ ಕೊರಿಯ: ಅಮೆರಿಕ ಆರೋಪ

Update: 2017-12-19 16:09 GMT

ವಾಶಿಂಗ್ಟನ್, ಡಿ. 19: ಈ ವರ್ಷದ ಆರಂಭದಲ್ಲಿ ಜಗತ್ತಿನಾದ್ಯಂತ ಆಸ್ಪತ್ರೆಗಳು, ಬ್ಯಾಂಕ್‌ಗಳು ಮತ್ತು ಇತರ ಕಂಪೆನಿಗಳ ಕಂಪ್ಯೂಟರ್ ವ್ಯವಸ್ಥೆಗಳನ್ನು ಹಾಳುಗೆಡವಿದ ‘ವಾನ್ನಾಕ್ರೈ’ ಸೈಬರ್ ದಾಳಿಯನ್ನು ನಡೆಸಿದ್ದು ಉತ್ತರ ಕೊರಿಯ ಎಂಬುದಾಗಿ ಅಮೆರಿಕದ ಟ್ರಂಪ್ ಆಡಳಿತ ಆರೋಪಿಸಿದೆ.

‘‘ದಾಳಿಯು ವ್ಯಾಪಕ ಪ್ರಮಾಣದಲ್ಲಿ ನಡೆಯಿತು ಹಾಗೂ ಬಿಲಿಯಗಟ್ಟಲೆ ಡಾಲರ್ ನಷ್ಟ ಉಂಟು ಮಾಡಿತು. ಅದಕ್ಕೆ ಉತ್ತರ ಕೊರಿಯ ನೇರವಾಗಿ ಜವಾಬ್ದಾರಿಯಾಗಿದೆ’’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಂತರಿಕ ಭದ್ರತಾ ಸಲಹೆಗಾರ ಟಾಮ್ ಬೋಸರ್ಟ್ ಸೋಮವಾರ ಪ್ರಕಟಗೊಂಡ ‘ವಾಲ್ ಸ್ಟ್ರೀಟ್ ಜರ್ನಲ್’ ಸಂಚಿಕೆಯಲ್ಲಿ ಬರೆದಿದ್ದಾರೆ.

‘‘ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಉತ್ತರ ಕೊರಿಯ ಕೆಟ್ಟದಾಗಿ ವರ್ತಿಸಿದೆ ಹಾಗೂ ಅದರ ದುಷ್ಟ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿವೆ’’ ಎಂದು ಬೋಸರ್ಟ್ ಹೇಳಿದ್ದಾರೆ. ‘‘ವಾನ್ನಾಕ್ರೈ ಕಂಪ್ಯೂಟರ್ ವೈರಸ್ ದಾಳಿಯು ಅತ್ಯಂತ ಬೇಜವಾಬ್ದಾರಿಯುತವಾಗಿದೆ’’ ಎಂದಿದ್ದಾರೆ.

‘‘ವಾನ್ನಾಕ್ರೈ’ ದಾಳಿಯನ್ನು ನಡೆಸಿರುವ ‘ಲಾಝರಸ್ ಗ್ರೂಪ್’ ಎಂಬ ಇಂಟರ್‌ನೆಟ್ ಕನ್ನ ಸಂಸ್ಥೆ ಉತ್ತರ ಕೊರಿಯದ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಅಮೆರಿಕ ಸರಕಾರ ಅತ್ಯಂತ ವಿಶ್ವಾಸಾರ್ಹ ವಿಧಾನಗಳಿಂದ ಪತ್ತೆಹಚ್ಚಿದೆ’’ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News