ಭಾರತ ಮಹತ್ವದ ಜಾಗತಿಕ ಶಕ್ತಿ: ಅಮೆರಿಕ ಅಧ್ಯಕ್ಷರ ‘ರಾಷ್ಟ್ರೀಯ ಭದ್ರತಾ ತಂತ್ರಗಾರಿಕೆ’ಯಲ್ಲಿ ಬಣ್ಣನೆ
ವಾಶಿಂಗ್ಟನ್, ಡಿ. 19: ‘ಪ್ರಮುಖ ಜಾಗತಿಕ ಶಕ್ತಿ’ಯಾಗಿ ಭಾರತದ ಏಳಿಗೆಯನ್ನು ಅಮೆರಿಕ ಸ್ವಾಗತಿಸುತ್ತದೆ ಹಾಗೂ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಗಳೊಂದಿಗೆ ಚತುಷ್ಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಬಯಸುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬಿಡುಗಡೆ ಮಾಡಿದ ನೂತನ ‘ರಾಷ್ಟ್ರೀಯ ಭದ್ರತಾ ತಂತ್ರಗಾರಿಕೆ’ ಹೇಳಿದೆ.
ಚೀನಾ ಮತ್ತು ರಶ್ಯಗಳು ಅಮೆರಿಕದ ಪ್ರಮುಖ ಪ್ರತಿಸ್ಪರ್ಧಿಗಳು ಎಂಬುದಾಗಿ ಬಣ್ಣಿಸಿರುವ ತಂತ್ರಗಾರಿಕೆಯು, ಈ ದೇಶಗಳು ‘ಸುಧಾರಣೆಗೊಳ್ಳುತ್ತಿರುವ’ ಶಕ್ತಿಗಳು ಎಂದಿದೆ.
ಅದೇ ವೇಳೆ, ಭಯೋತ್ಪಾದನೆ ನಿಗ್ರಹದಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಮಾಡುವಂತೆ ಹಾಗೂ ತನ್ನ ಪರಮಾಣು ಅಸ್ತ್ರಗಳ ‘ಜವಾಬ್ದಾರಿಯುತ ಕಾವಲುಗಾರ’ನಾಗುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಲಾಗುವುದು ಎಂದಿದೆ.
ಚೀನಾ ಮತ್ತು ರಶ್ಯಗಳಂತಹ ‘ಸುಧಾರಣಾವಾದಿ ಶಕ್ತಿಗಳು’, ಉತ್ತರ ಕೊರಿಯ ಮತ್ತು ಇರಾನ್‌ಗಳಂತಹ ‘ಧೂರ್ತ ದೇಶಗಳು’ ಮತ್ತು ಪಾಕಿಸ್ತಾನದಿಂದ ಕಾರ್ಯಾಚರಿಸುವ ‘ದೇಶದ ಹೊರಗಿನ ಭಯೋತ್ಪಾದಕ ಸಂಘಟನೆ’ಗಳಿಂದ ಅಮೆರಿಕಕ್ಕೆ ಬೆದರಿಕೆಯಿದೆ ಎಂದು ತಂತ್ರಗಾರಿಕೆ ತಿಳಿಸಿದೆ.
ಪಾಕ್‌ನಿಂದ ನಿರಂತರ ಬೆದರಿಕೆ
ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ದೇಶದ ಹೊರಗಿನ ಭಯೋತ್ಪಾದಕ ಮತ್ತು ಬಂಡುಕೋರ ಸಂಘಟನೆಗಳಿಂದ ಅಮೆರಿಕ ನಿರಂತರವಾಗಿ ಬೆದರಿಕೆಗಳನ್ನು ಎದುರಿಸುತ್ತಿದೆ ಎಂದು ‘ರಾಷ್ಟ್ರೀಯ ಭದ್ರತಾ ತಂತ್ರಗಾರಿಕೆ’ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸೇನಾ ಸಂಘರ್ಷ ನಡೆಯುವ ಸಾಧ್ಯತೆ ಅಮೆರಿಕದ ಅತಿ ದೊಡ್ಡ ಕಳವಳವಾಗಿದೆ ಹಾಗೂ ಒಂದು ವೇಳೆ, ಉಭಯ ದೇಶಗಳ ನಡುವೆ ಯುದ್ಧ ಸ್ಫೋಟಿಸಿದರೆ, ಅದು ಪರಮಾಣು ದಾಳಿಗೆ ಕಾರಣವಾಗಬಹುದು ಎಂದಿದೆ.
ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನ ‘ನಿರ್ಣಾಯಕ ಕ್ರಮ’ವನ್ನು ತೆಗೆದುಕೊಳ್ಳಬೇಕಿದೆ ಎಂದು ದಾಖಲೆಯನ್ನು ಬಿಡುಗಡೆಗೊಳಿಸಿದ ಟ್ರಂಪ್ ಹೇಳಿದರು.
‘‘ಅಮೆರಿಕ ಪಾಕಿಸ್ತಾನಕ್ಕೆ ತುಂಬಾ ಹಣವನ್ನು ನೀಡುತ್ತಿದೆ. ಅದು ಸದ್ಬಳಕೆಯಾಗಬೇಕು’’ ಎಂದರು.