‘ಸಂಘಟಿತರಾದಾಗ ಮಾತ್ರ ರೈತರ ಕೂಗು ಸರಕಾರಕ್ಕೆ ತಲುಪುವುದು’
ಉಡುಪಿ, ಡಿ.19: ಸರಕಾರಗಳು ಇಂದು ಕೃಷಿಯನ್ನು ಕಡೆಗಣಿಸಲು ಪ್ರಮುಖ ಕಾರಣ ರೈತರು ಸಂಘಟಿತರಾಗದಿರುವುದು. ಬೇರೆಲ್ಲಾ ಕ್ಷೇತ್ರಗಳಂತೆ ಕೃಷಿಯಲ್ಲೂ ರೈತರು ಸಂಘಟಿತರಾದರೆ ಸರಕಾರಗಳಿಗೆ ರೈತರ ಕೂಗು ಕೇಳಿಯೇ ಕೇಳುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯ್ಷ ಐ.ಎನ್. ಬಸವೇಗೌಡ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಒಂದು ದಿನದ ಭೇಟಿಯ ಸಂದರ್ಭದಲ್ಲಿ ಸೋಮವಾರ ಭಾಕಿಸಂನ ಜಿಲ್ಲಾ ಕಾರ್ಯಾಲಯದಲ್ಲಿ, ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಗಳ ಪದಾಧಿಕಾರಿಗಳನ್ನುದೆ್ದೀಶಿಸಿ ಅವರು ಮಾತನಾಡುತಿದ್ದರು.
ದೇಶದ ಒಟ್ಟು ಜನಸಂಖ್ಯೆಯ ಶೇ.70ರಷ್ಟು ಮಂದಿ ಕೃಷಿಯನ್ನೆ ಅವಲಂಬಿತ ವಾಗಿರುವುದರಿಂದ ಈ ದೇಶ ಸಮೃದ್ಧವಾಗಿದೆ.ಹೆಚ್ಚು ಹೆಚ್ಚು ಜನರು ಕೃಷಿಯಿಂದ ವಿಮುಖರಾದಂತೆ ಜನತೆಗೆ ಆಹಾರ, ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳನ್ನ ಒದಗಿಸುವುದು ಸರಕಾರಗಳಿಂದ ಖಂಡಿತಾ ಸಾಧ್ಯವಾಗದ ಮಾತು ಎಂದರು.
ರೈತರು ಬಹಳಷ್ಟು ಮಟ್ಟಿಗೆ ಸ್ವಾವಲಂಬಿಗಳಾಗಿ ಸರಕಾರದಿಂದ ಏನನ್ನು ಅಪೇಕ್ಷಿಸದಿರುವ ಕಾರಣ ಇಷ್ಟೊಂದು ಜನಸಂಖ್ಯೆಯ ಹೊರತಾಗಿಯೂ ಎಲ್ಲಾ ಅವಶ್ಯಕತೆಗಳನ್ನು ಸರಕಾರ ಪೂರೈಸುತ್ತಿದೆ ಎಂಬ ಭ್ರಮೆಯಲ್ಲಿ ಜನರಿದ್ದಾರೆ. ಈಗ ಎಲ್ಲಾ ಸರಕಾರಗಳು ಕೈಗಾರಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಕೃಷಿಯನ್ನ ಕಡೆಗಣಿಸುತ್ತಿವೆ. ಇವುಗಳಿಗೆ ಮುಖ್ಯ ಕಾರಣ ಅಸಂಘಟಿತವಾಗಿರುವ ಕೃಷಿಕರು. ಕೃಷಿಯಲ್ಲೂ ನಾವು ಸಂಘಟಿತರಾದರೆ ಸರಕಾರಗಳಿಗೂ ರೈತರ ಕೂಗು ಕೇಳುತ್ತಿತ್ತು. ಆಗ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಹಾಗೂ ಸರಕಾರ ರೈತರ ಬಳಿಗೆ ಬಂದು ಬೇಡಿಕೆಗಳ ಈಡೇರಿಕೆಯ ಕಡೆಗೆ ಪ್ರಧಾನ್ಯತೆ ಕೊಡುತಿದ್ದವು ಎಂದರು.
ಈ ಕಾರಣಕ್ಕಾಗಿ ದೇಶಾದ್ಯಂತ ರೈತರನ್ನು ರಾಜಕೀಯ ರಹಿತವಾಗಿ ಸಂಘಟಿ ಸುವ ಕೆಲಸ ಭಾಕಿಸಂನಿಂದ ನಡೆಯುತ್ತಿದೆ. ಈ ಬಾರಿ ದೇಶದಾದ್ಯಂತ ಸುಮಾರು ಒಂದೂವರೆ ಕೋಟಿ ರೈತ ಕುಟುಂಬಗಳನ್ನು ಸದಸ್ಯರನ್ನಾಗಿಸಲು ಸಂಘಟನೆ ತೀರ್ಮಾನಿಸಿದೆ. ಅದಕ್ಕೆ ಈ ಜಿಲ್ಲೆಯಲ್ಲೂ ಹೆಚ್ಚಿನ ಪ್ರಯತ್ನವಾಗಬೇಕು ಎಂದರು.
ಭಾಕಿಸಂನ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಮಾತನಾಡಿ, ಉತ್ತರ ಭಾರತದ ರಾಜ್ಯಗಳಲ್ಲಿ ಸಂಘಟನೆ ಸದೃಡವಾಗಿ ಬೆಳೆದಿರುವ ಕಾರಣ ಅಲ್ಲಿನ ಸರಕಾರಗಳು ರೈತರ ವಿಚಾರಗಳನ್ನು ಆಲಿಸುತ್ತಿವೆ. ಆದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಬೇರೆ ಬೇರೆ ಹಿತಾಸಕ್ತಿಯ ಸಂಘಟನೆಗಳು ಹುಟ್ಟಿ ಕೊಂಡಿರುವ ಕಾರಣ ಸರಕಾರಗಳು ರೈತರನ್ನು ಒಡೆದು ಆಳುವ ತಂತ್ರಗಾರಿಕೆಗೆ ಮುಂದಾಗಿವೆ. ಈ ಬಾರಿ ಭಾಕಿಸಂ ಕರ್ನಾಟಕದಲ್ಲಿ ಕನಿಷ್ಟ 5 ಲಕ್ಷ ಕುಟುಂಬ ಗಳನ್ನು ಸದಸ್ಯರನ್ನಾಗಿಸಲು ತೀರ್ಮಾನಿಸಿವೆ ಎಂದರು.
ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಬಿ.ವಿ.ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ನಿಟ್ಟೆ ವಂದಿಸಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಮಚಂದ್ರ ಅಲ್ಸೆ, ಸದಾನಂದ ಶೆಟ್ಟಿ, ಕೋಶಾಧಿಕಾರಿ ವಾಸುದೇವ ಶ್ಯಾನುಬಾಗ್, ಪ್ರಮುಖರಾದ ಪಾಂಡುರಂಗ ಹೆಗ್ಡೆ, ಗೋವಿಂದರಾಜ್ ಭಟ್, ಸೀತಾರಾಮ ಗಾಣಿಗ, ಹರೀಶ್ ಕುಮಾರ್ ಕಲ್ಯಾ, ಸುಂದರಶೆಟ್ಟಿ, ವೆಂಕಟೇಶ್ ರಾವ್, ಅನಂತ್ ಭಟ್, ಆಸ್ತೀಕ ಶಾಸ್ತ್ರೀ, ರಾಜೀವ ಶೆಟ್ಟಿ ಹೆಬ್ರಿ, ಕೆ.ಪಿ.ಭಂಡಾರಿ, ಪದ್ಮನಾ ಶೆಟ್ಟಿ, ಸುರೇಶ್ ಪ್ರು ಮುಂತಾದವರು ಉಪಸ್ಥಿತರಿದ್ದರು.