×
Ad

ಜಗತ್ತಿನಾದ್ಯಂತ ಈ ವರ್ಷ 65 ಪತ್ರಕರ್ತರ ಹತ್ಯೆ

Update: 2017-12-19 22:50 IST

ಪ್ಯಾರಿಸ್, ಡಿ. 19: 2017ರಲ್ಲಿ ಜಗತ್ತಿನಾದ್ಯಂತ 65 ಪತ್ರಕರ್ತರು ಮತ್ತು ಮಾಧ್ಯಮ ಕೆಲಸಗಾರರು ಮೃತಪಟ್ಟಿದ್ದಾರೆ ಎಂದು ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ (ಆರ್‌ಎಸ್‌ಎಫ್) ಮಂಗಳವಾರ ಬಿಡುಗಡೆ ಮಾಡಿದ ವಾರ್ಷಿಕ ಅಂಕಿಅಂಶಗಳು ಹೇಳಿವೆ.

ಈ ಪೈಕಿ 50 ಮಂದಿ ವೃತ್ತಿಪರ ವರದಿಗಾರರು. ಇದು 14 ವರ್ಷಗಳಲ್ಲೇ ಕಡಿಮೆ ಸಂಖ್ಯೆಯಾಗಿದೆ. ಆದಾಗ್ಯೂ, ಜಗತ್ತಿನ ಅತ್ಯಂತ ಅಪಾಯಕರ ಸ್ಥಳಗಳಲ್ಲಿ ಕೆಲಸ ಮಾಡುವುದನ್ನು ಪತ್ರಕರ್ತರು ತ್ಯಜಿಸಿರುವುದು ಈ ಇಳಿಕೆ ಪ್ರವೃತ್ತಿಗೆ ಒಂದು ಕಾರಣವಾಗಿದೆ.

ಯುದ್ಧಪೀಡಿತ ಸಿರಿಯ ಈಗಲೂ ಪತ್ರಕರ್ತರಿಗೆ ಅತ್ಯಂತ ಅಪಾಯಕಾರ ಸ್ಥಳವಾಗಿ ಮುಂದುವರಿದಿದೆ. ಈ ವರ್ಷ ಅಲ್ಲಿ 12 ಪತ್ರಕರ್ತರು ಹತರಾಗಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೊ ಇದೆ. ಅಲ್ಲಿ 11 ಪತ್ರಕರ್ತರು ಪ್ರಾಣ ಕಳೆದುಕೊಂಡಿದ್ದಾರೆ.

ಪತ್ರಕರ್ತರ ಪಾಲಿಗೆ ಅತ್ಯಂತ ಅಪಾಕಾರಿ ಯುದ್ಧರಹಿತ ದೇಶವೆಂದರೆ ಮೆಕ್ಸಿಕೊ. ಆ ದೇಶದಲ್ಲಿ ನಡೆಯುತ್ತಿರುವ ಅತ್ಯಂತ ಅಪಾಯಕಾರಿ ಮಾದಕ ದ್ರವ್ಯ ಯುದ್ಧವನ್ನು ಜಗತ್ತಿನ ಮುಂದೆ ತೆರೆದಿಟ್ಟ ಪ್ರಮುಖ ಪತ್ರಕರ್ತ ಜೇವಿಯರ್ ವಾಲ್ಡೇಝ್‌ರನ್ನು ಈ ವರ್ಷದ ಮೇ ತಿಂಗಳಲ್ಲಿ ನಡು ಹಗಲಲ್ಲೇ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದರು. ಇದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News