×
Ad

ಉಡುಪಿ: ತಾಪಂ ಸದಸ್ಯರಿಗೆ ಮಾಹಿತಿ ನೀಡದಂತೆ ಶಾಸಕರು ಸೂಚಿಸಿದ್ದಾರೆಯೇ?

Update: 2017-12-20 17:59 IST

ಉಡುಪಿ, ಡಿ. 20: ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಾಲೂಕು ಪಂಚಾಯತ್ ಸದಸ್ಯರುಗಳಿಗೆ ಮಾಹಿತಿ ನೀಡದೆ ನಿರ್ಲಕ್ಷಿಸಲಾಗುತ್ತಿದೆ. ತಾಪಂ ಸದಸ್ಯರುಗಳಿಗೆ ಯಾವುದೇ ಮಾಹಿತಿ ನೀಡದಂತೆ ಸ್ಥಳೀಯ ಶಾಸಕರು, ಸಚಿವರು ಸೂಚಿಸಿದ್ದಾರೆಯೇ ಎಂದು ಉಡುಪಿ ತಾಪಂ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಉಡುಪಿ ತಾಪಂ ಸಭಾಂಗಣದಲ್ಲಿ ಇಂದು ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಇಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷ ಎಂಬ ತಾರತಮ್ಯ ಅಲ್ಲ. ಎಲ್ಲ ಸದಸ್ಯರುಗಳಿಗೂ ಅವರವರ ಕ್ಷೇತ್ರಗಳಲ್ಲಿ ಆಗುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್ ಮಾತನಾಡಿ, ತಾಪಂ ಸದಸ್ಯರ ಯಾವ ಮಾಹಿತಿಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರಿಯಾದ ಮಾಹಿತಿ ನೀಡದೆ ಕತ್ತಲೆಯಲ್ಲಿ ಇಡಲಾಗುತ್ತದೆ ಎಂದು ದೂರಿದರು. ಶಿಷ್ಟಾಚಾರದ ಪ್ರಕಾರ ಜಿಪಂ, ತಾಪಂ ಸದಸ್ಯರು ಹಾಗೂ ಗ್ರಾಪಂ ಅಧ್ಯಕ್ಷರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್ ಹೇಳಿದರು. ಡಾ.ಸುನೀತಾ ಶೆಟ್ಟಿ ಮಾತನಾಡಿ, ಶಾಸಕರುಗಳ ಕಚೇರಿ ಯಿಂದ ಪ್ರತಿಯೊಂದು ಕಾರ್ಯಕ್ರಮಗಳ ಬಗ್ಗೆ ಆಯಾ ಗ್ರಾಪಂಗಳಿಗೆ ಮಾಹಿತಿ ನೀಡು ಕೆಲಸ ಮಾಡಲಾಗುತ್ತಿದೆ ಎಂದರು.

ಡಾಟಾ ಎಂಟ್ರಿ ನೇಮಕಾತಿ: ರಾಜ್ಯ ಸರಕಾರವು ಗ್ರಾಪಂಗಳಿಗೆ ಹೊಸ ದಾಗಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸುವ ಪ್ರಕ್ರಿಯೆಗೆ ಮುಂದಾ ಗಿದ್ದು, ಇದರಿಂದ ಈಗಾಗಲೇ ಕಳೆದ 10ವರ್ಷಗಳಿಂದ ತಾತ್ಕಾಲಿಕವಾಗಿ ದುಡಿಯುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ತೊಂದರೆಯಾಗಿದೆ. ಆದುದರಿಂದ ನೇಮಕಾತಿ ಸಂದರ್ಭದಲ್ಲಿ ಈಗಾಗಲೇ ಇರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಆದ್ಯತೆ ನೀಡಿ, ಹುದ್ದೆ ಖಾಲಿ ಇರುವಲ್ಲಿ ಹೊಸ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸುಧೀರ್ ಕುಮಾರ್ ಶೆಟ್ಟಿ ಒತ್ತಾಯಿಸಿದರು.

ಈ ಬಗ್ಗೆ ಇಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದು ದರಿಂದ ಈ ಕುರಿತು ಜಿಲ್ಲಾ ಪಂಚಾಯತ್ ಮೂಲಕ ರಾಜ್ಯ ಸರಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ಸದಸ್ಯ ಭುಜಂಗ ಶೆಟ್ಟಿ ಮಾತನಾಡಿ, ಕಾಡೂರು ವ್ಯಾಪ್ತಿಯ ಮುಂಡಾಡಿ ಎಂಬಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನ ನೀರನ್ನು ಕೃಷಿ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡಬೇಕು. ಈ ನೀರನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಳಸುವ ಬಗ್ಗೆ ಮಾಹಿತಿ ಇದ್ದು, ಯಾವುದೇ ಕಾರಣಕ್ಕೂ ಇಲ್ಲಿ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಈ ಪ್ರದೇಶದಲ್ಲಿ ಸುಮಾರು 300 ಎಕರೆ ಕೃಷಿ ಭೂಮಿ ಇದೆ. ಕಳೆದ ಬಾರಿ ಕಿಂಡಿ ಅಣೆಕಟ್ಟಿನ ಸರಿಯಾದ ನಿರ್ವಹಣೆ ಇಲ್ಲದ ಕಾರಣ ನೀರಿನ ಸಮಸ್ಯೆ ಉಂಟಾಗಿ ಎಕರೆ ಕಟ್ಟಲೆ ಕೃಷಿ ಭೂಮಿ ನಾಶವಾಗಿತ್ತು. ಬಹುಗ್ರಾಮ ಕುಡಿ ಯುವ ನೀರಿನ ಯೋಜನೆಗೆ ಸೀತಾನದಿಗೆ ವಾರಾಹಿ ನದಿಯ ನೀರನ್ನು ಹರಿಸಿ ಬಳಸಿಕೊಳ್ಳುವ ಕಾರ್ಯ ಮಾಡಬಹುು ಎಂದು ಅವರು ಸಲಹೆ ನೀಡಿದರು.

ಆರ್‌ಟಿಸಿ ಸಮಸ್ಯೆ: ಬಾಪೂಜಿ ಕೇಂದ್ರಗಳಲ್ಲಿ ಆರ್‌ಟಿಸಿ ಸಿಗದೆ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಸದಸ್ಯರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ, ಕೇಂದ್ರದಲ್ಲಿ ಪೇಪರ್ ಕೊರತೆಯಿಂದಾಗಿ ಆರ್‌ಟಿಸಿ ಸಮಸ್ಯೆ ಎದುರಾಗಿತ್ತು. ಆದರೆ ಇದೀಗ ಯಾವುದೇ ಪೇಪರ್ ನಲ್ಲಿಯೂ ಆರ್‌ಟಿಸಿ ಪ್ರಿಂಟ್ ತೆಗೆಯುವಂತೆ ಮಾಡಲಾಗಿದೆ. ಆದರೆ ಸಾಫ್ಟ್ ವೇರ್ ಸಮಸ್ಯೆಯಿಂದ ಆರ್‌ಟಿಸಿ ತೆಗೆಯಲು ಆಗುತ್ತಿಲ್ಲ ಎಂದರು.

ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು ಒಂದು ವರ್ಷ ವಾಗುತ್ತಾ ಬಂದರೂ ಗ್ರಾಮ ಲೆಕ್ಕಿಗರು ಅವರ ಮರಣ ಪ್ರಮಾಣಪತ್ರ ಪಡೆಯಲು ಅವಕಾಶ ನೀಡುತ್ತಿಲ್ಲ. ಹೀಗೆ ವಿಳಂಬವಾದರೆ ಆ ಬಡ ಕುಟುಂಬ ಕೋರ್ಟ್‌ಗೆ ಹೋಗಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಕೇಶವ ಮೊಲಿ ಆರೋಪಿಸಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಮೊದಲಾದವರು ಹಾಜರಿದ್ದರು.

ಅರಣ್ಯಾಧಿಕಾರಿ ವಿರುದ್ಧ ಸಿಇಒಗೆ ದೂರು

ಸದಸ್ಯೆ ಡಾ.ಸುನೀತಾ ಶೆಟ್ಟಿ ಅವರ ಡೀಮ್ಡ್ ಫಾರೆಸ್ಟ್‌ನಲ್ಲಿ ರಸ್ತೆ ಅಭಿವೃದ್ಧಿ ಪಡಿಸುವ ಕುರಿತ ಪ್ರಶ್ನೆಗೆ ಉತ್ತರಿಸಬೇಕಾದ ಹೆಬ್ರಿ ವಲಯ ಅರಣ್ಯಾಧಿಕಾರಿ ಗಳು ಕಳೆದ ಎರಡು ಸಾಮಾನ್ಯ ಸಭೆಗಳಲ್ಲಿ ಹಾಜರಾಗಿಲ್ಲ. ಈ ಬಾರಿ ಸಭೆ ಯಲ್ಲಿ ಸ್ಪಷ್ಟ ಮಾಹಿತಿಯೊಂದಿಗೆ ಹಾಜರಾಗಲು ನೋಟೀಸ್ ನೀಡಿದರೂ ಗೈರು ಹಾಜರಾಗಿದ್ದಾರೆ. ಇವರ ಈ ವರ್ತನೆಯ ವಿರುದ್ಧ ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News