ಡಿ. 23: ಜಿಡೆಕಲ್ಲು ಕಾಲೇಜಿನಲ್ಲಿ ‘ಬೃಹತ್ ಉದ್ಯೋಗಮೇಳ’
ಪುತ್ತೂರು, ಡಿ. 20: ತಾಲೂಕಿನಲ್ಲಿ ಮೊದಲ ಬಾರಿಗೆ ಪುತ್ತೂರು ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರಿನ ಬಿ.ಜೆ. ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಡಿ. 23ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೊಗ ಮೇಳದಲ್ಲಿ ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ನಳಿನಾಕ್ಷಿ ಎ.ಎಸ್ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸುಮಾರು 30 ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಬೆಂಗಳೂರಿನ 24 ಕಂಪೆನಿಗಳು ಹಾಗೂ ಮಂಗಳೂರು , ಪುತ್ತೂರಿನ 6 ಕಂಪೆನಿಗಳು ಭಾಗವಹಿಸಲಿವೆ. ಸುಮಾರು 500ರಿಂದ 600 ಹುದ್ದೆಗಳಿಗೆ ಈ ಉದ್ಯೋಗಮೇಳದಲ್ಲಿ ನೇರ ಆಯ್ಕೆ ನಡೆಯಲಿದೆ. ಸುಮಾರು 800 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಉದ್ಯೋಗ ಮೇಳದ ಪ್ರಯುಕ್ತ ಡಿ.21 ರಂದು ಬೆಳಗ್ಗೆ 9 ಗಂಟೆಯಿಂದ ಮದ್ಯಾಜ್ನ 1 ಗಂಟೆಯ ವರೆಗೆ ಜಿಡೆಕಲ್ಲು ಕಾಲೇಜಿನಲ್ಲಿ ಉಚಿತ ಸಂದರ್ಶನ ಪೂರ್ವ ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಸಂದರ್ಶನವನ್ನು ಎದುರಿಸುವ ಬಗ್ಗೆ ರಾಷ್ಟ್ರೀಯ ತರಬೇತುದಾರರು ಮಾಹಿತಿ ನೀಡಲಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಉದ್ಯೋಗಮೇಳ ದಲ್ಲಿ ಯಾವುದೇ ನೋಂದಾವಣೆ ಶುಲ್ಕ ಇರುವುದಿಲ್ಲ. ಉದ್ಯೋಗ ಆಕಾಂಕ್ಷಿಗಳ ಅನುಕೂಲಕ್ಕಾಗಿ ಪುತ್ತೂರು ಖಾಸಗಿ ಬಸ್ ನಿಲ್ದಾಣದಿಂದ ಉದ್ಯೋಗ ಮೇಳ ನಡೆಯುವ ಜಿಡೆಕಲ್ಲು ಕಾಲೇಜಿಗೆ ಉಚಿತ ಬಸ್ ಸೌಲಭ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಕಾರ್ಯಕ್ರಮವನ್ನು ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಬಿ.ಜೆ. ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಗಣೇಶ್ ಜಿ.ಭಟ್, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಉದಯಶಂಕರ ಎಚ್, ಕಾಲೇಜು ಶಿಕ್ಷಣ ಇಲಾಖೆಯ ಪ್ಲೇಸ್‌ಮೆಂಟ್ ಸೆಲ್ ನ ನೋಡೆಲ್ ಅಧಿಕಾರಿ ಎ.ನಾರಾಯಣ ಪ್ರಸಾದ್ ಭಾಗವಹಿಸಲಿದ್ದಾರೆ.
ಉದ್ಯೋಗಮೇಳದ ಸ್ಥಳದಲ್ಲಿಯೇ ಆಕಾಂಕ್ಷಿಗಳು ತಮ್ಮ ಹೆಸರು ನೋಂದಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ 9742454909 ಹಾಗೂ 9481768715 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಟ್ರಸ್ಟ್‌ನ ಮಾನವ ಸಂಪನ್ಮೂಲ ಅಧಿಕಾರಿ ಜಯಶ್ರೀ, ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್‌ನ ಸಂಚಾಲಕ ಪಧ್ಮನಾಭ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾಕೋಶದ ಸಂಚಾಲಕ ಹರೀಶ್ ನಾಯಕ್ ಎಸ್ ಉಪಸ್ಥಿತರಿದ್ದರು.