×
Ad

ಡಿ.24: ಪಡುಬಿದ್ರೆಯಲ್ಲಿ ಜಿಲ್ಲಾ ಮಟ್ಟದ ಅಂತರ್‌ ಯುವ ಮಂಡಲಗಳ ಕ್ರೀಡಾಕೂಟ

Update: 2017-12-20 19:39 IST

ಪಡುಬಿದ್ರೆ, ಡಿ. 20: ಜಿಲ್ಲಾ ಮಟ್ಟದ ಅಂತರ್‌ಯುವ ಮಂಡಲಗಳ ಕ್ರೀಡಾಕೂಟ ಎರ್ಮಾಳು ತೆಂಕ ಕಿನಾರ ಆಂಗ್ಲ ಮಾಧ್ಯಮ ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ.24ರಂದು ನಡೆಯಲಿದೆ.

ಕಾಪು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಯುವಕ ಮಂಡಲ ಗೌರವಾಧ್ಯಕ್ಷ ಸತೀಶ್ ಸಾಲ್ಯಾನ್ ಹೇಳಿದರು.

ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವಕೇಂದ್ರ ಉಡುಪಿ, ಯುವಕ ಮಂಡಲ ಎರ್ಮಾಳು ತೆಂಕ ಹಾಗೂ ಯೂತ್‌ಕ್ಲಬ್ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ವಾಲಿಬಾಲ್, ತ್ರೋಬಾಲ್, ಗ್ರಾಮೀಣ ಕ್ರೀಡೆಗಳಾದ ತೆಂಗಿನ ಕಾಯಿ ಓಟ, ಸಂಗೀತ ಕುರ್ಚಿ, ನಿಧಿ ಶೋಧನ, ಬಲೂನ್ ಹೊಡೆಯುವುದು, ಒಂಟಿ ಕಾಲು ಓಟ ಸಹಿತ ಹಲವು ಕ್ರೀಡೆಗಳು ನಡೆಯಲಿದೆ.

ಬೆಳಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಮುಂಬಯ ಯೂತ್‌ಕ್ಲಬ್ ಅಧ್ಯಕ್ಷ ಯೋಗೀಶ್ ಕರ್ಕೇರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲ ಉಪಾಧ್ಯಕ್ಷ ಕಿಶನ್ ಪುತ್ರನ್ ಅಧ್ಯಕ್ಷತೆ ವಹಿಸಲಿದ್ದು, ನೆಹರೂ ಯುವಕೇಂದ್ರ ಜಿಲ್ಲಾ ಯುವಸಮನ್ವಯ ಅಧಿಕಾರಿ ವಿಲ್‌ಫ್ರೆಡ್ ಡಿಸೋಜ ಮತ್ತಿತರರು ಭಾಗವಹಿಸಲಿದ್ದಾರೆ.

ಸುವರ್ಣ ಸಂಭ್ರಮ, ರಜತಮಹೋತ್ಸವ: ಯುವಕ ಮಂಡಲ ಎರ್ಮಾಳು ಇದರ 50ನೆ ವರ್ಷದ ಅಂಗವಾಗಿ ಸುವರ್ಣ ಸಂಭ್ರಮ ಯೂತ್‌ಕ್ಲಬ್ 25ನೆ ವರ್ಷದ ಅಂಗವಾಗಿ ರಜತಮಹೋತ್ಸವವು ಡಿ.29ರಂದು ಕಿನಾರ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಯುವಕ ಮಂಡಲ ಅಧ್ಯಕ್ಷ ಮೋಹನ ಸುವರ್ಣ ಹೇಳಿದರು.

1968ರಲ್ಲಿ ಗ್ರಾಮದ ಯುವಶಕ್ತಿಯನ್ನು ಸಮಘಟಿಸಿ ಅವರಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ತೆಂಕ ಎರ್ಮಾಳಿನಲ್ಲಿ ಯುವಕ ಮಂಡಲವನ್ನು ರಚಿಸಲಾಯಿತು. 50ವರ್ಷಗಳಿಂದಲೂ ಸಂಸ್ಥೆಯ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಆ ಬಳಿಕ ಮುಂಬೈಯಲ್ಲಿ ಯೂತ್‌ಕ್ಲಬ್ ಸ್ಥಾಪಿಸಲಾಯಿತು. ಇದೀಗ ಯೂತ್‌ಕ್ಲಬ್ 25ವರ್ಷ ಪೂರೈಸಿದೆ. ವಿದ್ಯಾನಿಧಿ, ಆರೋಗ್ಯನಿಧಿ, ಕ್ರೀಡಾನಿಧಿ, ಸೇವಾ ನಿಧಿ, ಸಾಂಸ್ಕೃತಿಕ ನಿಧಿ, ಧಾರ್ಮಿಕ ಸೇವಾನಿಧಿ, ಪರಿಸರ ನಿಧಿ ಭವಿಷ್ಯದ ಯೋಜನೆಗಳಾಗಿವೆ ಎಂದು ಅವರು ಹೇಳಿದರು.

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಯುವಕ ಮಂಡಲ ಅಧ್ಯಕ್ಷ ಮೋಹನ ಸುವರ್ಣ ಅಧ್ಯಕ್ಷತೆ ವಹಿಸಲಿದ್ದು, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಾಜಿ ಶಾಸಕ ಲಾಲಾಜಿ ಮೆಂಡನ್, ದಕ. ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮತ್ತಿತತರು ಭಾಗವಹಿಸಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕಿರಣ್ ಕಾಂಚನ್, ಸಾಂಸ್ಕೃತಿಕ ಕಾರ್ಯದರ್ಶಿ ಧರ್ಮರಾಜ್ ಎರ್ಮಾಳು, ಸುಕೇಶ್ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News