ಶತಮಾನೋತ್ಸವ ಸಂಭ್ರಮದಲ್ಲಿ ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ
ಕಾಪು, ಡಿ. 20: ಕಾಪು ಮಜೂರು-ಕರಂದಾಡಿ ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಡಿ.22 ಮತ್ತು 23 ರಂದು ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಲೀಲಾಧರ ಶೆಟ್ಟಿ ಹೇಳಿದರು.
ಕಾಪು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. 1917ರಲ್ಲಿ ದಿ.ಕರಂದಾಡಿ ರಾಮರಾಯ ಶಾನುಭಾಗ್ ಅವರು ಆರಂಭಿಸಿದ ಸಾವಿರಾರು ಮಂದಿ ಶಿಕ್ಷಣ ಪಡೆದು ವಿವಿಧ ಉನ್ನತ ಹುದ್ದೆಗಳಲ್ಲಿ ಉದ್ಯೋಗ ನಡೆಸುತಿದ್ದಾರೆ. 1960ರಲ್ಲಿ ದಿ.ಟಿ.ಸೀತಾರಾಮ ರವರು ದಿ.ಟಿ.ಕೃಷ್ಣ ಶೆಟ್ಟಿ ಸಂಚಾಲಕತ್ವದಲ್ಲಿ ಶಾಲೆಯನ್ನು ಅಭಿವೃದ್ಧಿ ಪಡಿಸಿದರು. 1977ರರಲ್ಲಿ ಶಾಲಾ ಹಳೆವಿದ್ಯಾರ್ಥಿ ಸೇರಿಸಿ ವಜ್ರಮಹೋತ್ಸವ ಸಮಿತಿಯನ್ನು ರಚಿಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಶಾಲೆಯಲ್ಲಿ 160ಮಕ್ಕಳು ವಿದ್ಯಾರ್ಜನೆ ಪಡೆಯುತಿದ್ದಾರೆ.
ಡಿ.22 ರಂದು ಸಂಜೆ 7 ಗಂಟೆಗೆ ಶತಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಲಾಗುವುದು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ವಾಸುದೇವ ರಾವ್ ಅಧ್ಯಕ್ಷತೆ ವಹಿಸುವರು. ವಿಜಯ ಬ್ಯಾಂಕ್‌ನ ನಿವೃತ್ತ ಜಿಎಂ ಜಯಕರ ಶೆಟ್ಟಿ ಮಜೂರು, ಮಣಿಪಾಲ ಕೆಎಂಸಿಯ ವೈದ್ಯಕೀಯ ಉಪ ಅಧೀಕ್ಷಕ ಡಾ. ಪದ್ಮರಾಜ ಹೆಗ್ಡೆ, ಶಾಲಾ ಸ್ಥಾಪಕ ವಂಶದ ಕೆ. ಜಗದೀಶ ರಾವ್ ಅವರನ್ನು ಗೌರವಿಸಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿ. 23ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆ. ಲೀಲಾಧರ ಶೆಟ್ಟಿ ವಹಿಸಲಿದ್ದು, ಶಾಸಕ ವಿನಯಕುಮಾರ್ ಸೊರಕೆ, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್, ಉದ್ಯಮಿಗಳಾದ ಶೇಖರ ಬಿ ಶೆಟ್ಟಿ, ಮನೋಹರ ಶೆಟ್ಟಿ ಕಾಪು ಭಾಗವಹಿಸುವರು. ದಕ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ, ಉದ್ಯಮಿ ಎ.ಬಿ.ಷಾ ಹಾಗೂ ದಾನಿ ಈಶ್ವರ ಬಂಗೇರ ಅವರನ್ನು ಸನ್ಮಾನಿಸಲಾಗುವುದು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಎರಡೂ ದಿನಗಳ ಸಮಾರಂಭದಲ್ಲಿ ಅಭಿನಂದಿಸಲಾಗುವುದು. ಶಾಲಾ ಮಕ್ಕಳ ಮನೋರಂಜನಾ ಕಾರ್ಯಕ್ರಮದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ನಾಗಭೂಷಣ ರಾವ್, ಹಳೆ ವಿದ್ಯಾರ್ಥಿ ಸಂಘದ ಸದಸ್ಯ ದಿವಾಕರ ಶೆಟ್ಟಿ ಇದ್ದರು.