ಮಣಿಪಾಲ: ಡಿ.27ಕ್ಕೆ ಪ್ರೊ.ಅಚ್ಯುತರಾವ್ ಸ್ಮಾರಕ ಇತಿಹಾಸ ಸಮ್ಮೇಳನ
ಉಡುಪಿ, ಡಿ.20: ಮೈಸೂರಿನ ಖ್ಯಾತ ಇತಿಹಾಸಜ್ಞ ಪ್ರೊ.ಅಚ್ಚುತ ರಾವ್ ಸ್ಮಾರಕ ಇತಿಹಾಸ ಸಮ್ಮೇಳನವೊಂದು ಮಣಿಪಾಲ್ ಸೆಂಟರ್ ಪಾರ್ ಫಿಲಾಸಫಿ ಆ್ಯಂಡ್ ಹ್ಯುಮಾನಿಟೀಸ್ (ಎಂಸಿಪಿಎಚ್)ನಲ್ಲಿ ಡಿ. 27ರಂದು ನಡೆಯಲಿದೆ.
ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಇತಿಹಾಸ ತಜ್ಞ ಹಾಗೂ ಪ್ರಾಧ್ಯಾಪಕರೂ ಆಗಿದ್ದ ಪ್ರೊ.ಅಚ್ಯುತರಾವ್, ಕ್ರಿ.ಶ. 1600 ಮತ್ತು 1800ರ ನಡುವಿನ ಅವಧಿಯ ಲಭ್ಯವಿರುವ ಸಮಕಾಲೀನ ವಸ್ತುಗಳ ಅಧ್ಯಯನದ ಮೂಲಕ ಮೈಸೂರಿನ ಸಾಮಾಜಿಕ ಮತ್ತು ಆಡಳಿತಾತ್ಮಕ ಇತಿಹಾಸವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.1965ರಲ್ಲಿ ತಮ್ಮ 47ನೇ ವಯಸ್ಸಿನಲ್ಲಿ ನಿಧನರಾದ ಅಚ್ಯುತರಾವ್ ಅವರ ನೆನಪನ್ನು ಅಜರಾಮರ ಗೊಳಿಸುವ ದೃಷ್ಟಿಯಿಂದ ಡಿಎಸ್‌ಎ (ಡಿ.ಎಸ್.ಅಚ್ಯುತರಾವ್) ಸ್ಮಾರಕ ಟ್ರಸ್ಟ್‌ನ ಅಡಿಯಲ್ಲಿ 2017ರಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ನಿಖರವಾದ ಸಂಶೋಧನೆಯ ಮೂಲಕ ಮೈಸೂರಿನ ಮರೆತು ಹೋದ ಇತಿಹಾಸದ ಪ್ರಮುಖ ಘಟನಾವಳಿಗಳನ್ನು ಬೆಳಕಿಗೆ ತರುವಲ್ಲಿ ಪ್ರೊ. ರಾವ್ ಮಹತ್ವದ ಪಾತ್ರ ವಹಿಸಿದ್ದರು.ಪ್ರೊ.ರಾವ್ ಅವರ ಜನ್ಮ ಶತಮಾನೋತ್ಸವ ವರ್ಷವಾದ 2017ರಲ್ಲಿ ಅವರ ನೆನಪಿನಲ್ಲಿ ಈಗಾಗಲೇ ನಾಲ್ಕು ಮಹತ್ವದ ಕಾರ್ಯಕ್ರಮಗಳನ್ನು ಭಾರತದ ಗಂಭೀರ ಇತಿಹಾಸಕಾರರ ಹೆಸರಿನಲ್ಲಿ ನಡೆಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾಗಿರುವ ಡಿ.ಎ.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಣಿಪಾಲದ ಸಮ್ಮೇಳನವು ಪ್ರಾಚೀನ ಭಾರತ ಇತಿಹಾಸದ ಕುರಿತಂತೆ ನಡೆಯಲಿದೆ. ಇದರಲ್ಲಿ ದಿಲ್ಲಿ ವಿವಿಯ ಖ್ಯಾತ ಇತಿಹಾಸಜ್ಞ ಪ್ರೊ. ಉಪಿಂದರ್ ಸಿಂಗ್ ಅವರು ಏಷ್ಯದ ಪ್ರಾಚೀನ ನಾಗರೀಕತೆಯ ಕುರಿತಂತೆ ಬೆಳಕು ಚೆಲ್ಲಲಿದ್ದಾರೆ. ಕೊನೆಯಲ್ಲಿ ಖ್ಯಾತ ಭರತನಾಟ್ಯ ಕಲಾವಿದರಾದ ಲಕ್ಷ್ಮಿ ಗೋಪಾಲಸ್ವಾಮಿ ಹಾಗೂ ಸತ್ಯನಾರಾಯಣ ರಾಜು ಇವರಿಂದ ಭರತನಾಟ್ಯ ಕಾರ್ಯಕ್ರಮವಿದೆ ಎಂದವರು ತಿಳಿಸಿದ್ದಾರೆ.