ಬಾಲ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ: ಮಕ್ಕಳ ನ್ಯಾಯ ಮಂಡಳಿ
ಗುರ್ಗಾಂವ್, ಡಿ. 20: ರ್ಯಾನ್ ಇಂಟರ್‌ನ್ಯಾಶನಲ್ ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನನನ್ನು ಹತ್ಯೆಗೈದ 16 ವರ್ಷದ ವಿದ್ಯಾರ್ಥಿಯನ್ನು ವಯಸ್ಕನಂತೆ ಪರಿಗಣಿಸಬೇಕು ಎಂದು ಗುರ್ಗಾಂವ್‌ನ ಮಕ್ಕಳ ನ್ಯಾಯ ಮಂಡಳಿ ಬುಧವಾರ ಹೇಳಿದೆ.ಮೃತ ಬಾಲಕನ ತಂದೆ ಸಲ್ಲಿಸಿದ ಮನವಿ ಕುರಿತು ತೀರ್ಪು ನೀಡಿರುವ ಮಂಡಳಿ, ಆರೋಪಿ ಬಾಲಕನನ್ನು ವಯಸ್ಕನಂತೆ ಪರಿಗಣಿಸಬೇಕು ಹಾಗೂ ಡಿಸೆಂಬರ್ 22ರಂದು ಸೆಷನ್ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದಿದೆ.
ಇದು ಉನ್ನತ ಮಟ್ಟದ ಪ್ರಕರಣವೊಂದರ ಪ್ರಮುಖ ಬದಲಾವಣೆ ಎಂದು ಮೃತ ಬಾಲಕನ ತಂದೆ ಪರ ವಕೀಲ ಸುಶೀಲ್ ಟೆಕ್ರಿವಾಲ್ ವ್ಯಾಖ್ಯಾನಿಸಿದ್ದಾರೆ. ‘ಬಾಲಕನನ್ನು ವಯಸ್ಕನಂತೆ ಪರಿಗಣಿಸಬೇಕು ಎಂಬ ಮಂಡಳಿಯ ತೀರ್ಪು ಚಾರಿತ್ರಿಕ. ಇನ್ನು ಬಾಲಕನನ್ನು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯನ್ನು ಸಂಬಂಧಿತ ಮಕ್ಕಳ ಸತ್ರ ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ’ ಎಂದು ಟೆಕ್ರಿವಾಲ್ ಹೇಳಿದ್ದಾರೆ.
ಬಾಲಕ ಅಪರಾಧಿ ಎಂದು ಸಾಬೀತಾದರೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಬಿಡುಗಡೆ ಮಾಡಬಾರದು. 14 ವರ್ಷಗಳ ಶಿಕ್ಷೆ ವಿಧಿಸಬಹುದು ಎಂಬುದು ತೀರ್ಪಿ ತಾತ್ಪರ್ಯ. ‘ಬಾಲ ಆರೋಪಿ ಅಪರಾಧಿ ಎಂದು ಸಾಬೀತಾದರೆ, 21 ವರ್ಷದ ವರೆಗೆ ಅವಲೋಕನ ನಿವಾಸದಲ್ಲಿ ಇರಿಸಬೇಕು. ಆದರೆ, ಜೆಜೆ ಕಾಯ್ದೆಯ 21ನೇ ಕಲಂ ಪ್ರಕಾರ ಆತನಿಗೆ ಜೀವಾವಧಿ ಅಥವಾ ಮರಣ ದಂಡನೆ ವಿಧಿಸುವಂತಿಲ್ಲ’ ಎಂದು ಮಂಡಳಿ ಹೇಳಿದೆ.