×
Ad

ಶಿರಿಬೀಡು: ಒಂದೇ ಸ್ಥಳದಲ್ಲಿ ಎರಡನೆ ಬಾರಿಗೆ ನಿಯಂತ್ರಣ ತಪ್ಪಿದ ಸಿಟಿಬಸ್ !

Update: 2017-12-20 21:35 IST

ಉಡುಪಿ, ಡಿ. 20: ನಗರದ ಶಿರಿಬೀಡು ಜಂಕ್ಷನ್‌ನಲ್ಲಿ 15 ದಿನಗಳ ಅವಧಿಯಲ್ಲಿ ಇಂದು ರಾತ್ರಿ ಸಿಟಿಬಸ್ಸೊಂದು ಎರಡನೇ ಬಾರಿಗೆ ನಿಯಂತ್ರಣ ತಪ್ಪಿ ಮೂರು ವಾಹನಗಳಿಗೆ ಢಿಕ್ಕಿ ಹೊಡೆದಿದ್ದು, ಈ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಮಗುವೊಂದು ಸಣ್ಣ ಗಾಯದೊಂದಿಗೆ ಅಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.

ಉಡುಪಿ ಸಿಟಿಬಸ್‌ ನಿಲ್ದಾಣದಿಂದ ಶಿರಿಬೀಡುವಿನಲ್ಲಿರುವ ಗ್ಯಾರೇಜ್‌ಗೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದ ಅಂಬಾ ಸಿಟಿಬಸ್ ಚಾಲಕನ ನಿಯಂತ್ರಣ ತಪ್ಪಿ ಎರಡು ದ್ವಿಚಕ್ರ ವಾಹನ ಹಾಗೂ ಒಂದು ಕಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಪ್ರಮೋದ್ ಕುಮಾರ್ ಎಂಬವರ ದ್ವಿಚಕ್ರ ವಾಹನ ಬಸ್ಸಿನ ಚಕ್ರದಡಿಗೆ ಬಿದ್ದು ಸಂಪೂರ್ಣ ಜಖಂಗೊಂಡಿದೆ.

ಈ ವೇಳೆ ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಶ್ರೀನಿವಾಸ ಭಟ್ ಎಂಬವರು ಬಸ್ ಮುನ್ನುಗ್ಗಿ ಬರುತ್ತಿರುವುದನ್ನು ಗಮನಿಸಿ ಕೂಡಲೇ ತನ್ನೊಂದಿಗಿದ್ದ ಮಗು ಜೊತೆ ರಸ್ತೆಗೆ ಹಾರಿದ್ದು, ಇದರಿಂದ ಅವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭ ಮಗುವಿಗೆ ಸಣ್ಣ ಪುಟ್ಟ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಸಮೀಪದಲ್ಲಿದ್ದ ಕಾರಿಗೂ ಢಿಕ್ಕಿ ಹೊಡೆದ ಪರಿಣಾಮ ಕಾರಿಗೆ ಸಣ್ಣ ಮಟ್ಟದ ಹಾನಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದೇ ಸಿಟಿ ಬಸ್ ಡಿ. 4ರಂದು ಇದೇ ಸ್ಥಳದಲ್ಲಿ ವಿರುದ್ಧ ದಿಕ್ಕಿನಲ್ಲಿ ಗ್ಯಾರೇಜ್‌ಗೆ ಹೋಗುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಸಿಗ್ನಲ್ ಲೈಟ್‌ಗೆ ಢಿಕ್ಕಿ ಹೊಡೆದು ಫುಟ್‌ಪಾತ್ ಕಾಂಕ್ರೀಟ್ ತಡೆಯಿಂದಾಗಿ ನಿಂತಿತ್ತು. ಇಲ್ಲದಿದ್ದಲ್ಲಿ ಬಸ್ ಸಮೀಪದ ಸರಸ್ವತಿ ಶಾಲೆಗೆ ನುಗ್ಗಿ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದರು. ಈ ಎರಡೂ ಅವಘಡ ಬ್ರೇಕ್‌ಫೈಲ್‌ನಿಂದ ಸಂಭವಿಸಿರುವುದಾಗಿ ಬಸ್ ಚಾಲಕರು ತಿಳಿಸಿದ್ದಾರೆ.

ಎರಡನೆ ಬಾರಿ ಒಂದೇ ಸ್ಥಳದಲ್ಲಿ ಈ ರೀತಿಯ ಘಟನೆ ಸಂಭವಿಸಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸಿಟಿಬಸ್ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರುದ್ಧ ದಿಕ್ಕಿನಿಂದ ಸಿಟಿಬಸ್‌ಗಳು ಗ್ಯಾರೇಜ್‌ಗೆ ಹೋಗುವುದರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ದ್ವಿಚಕ್ರ ವಾಹನ ಸವಾರ ಪ್ರಮೋದ್ ನೀಡುವ ದೂರಿನಂತೆ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರಿ ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News