ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ-ಮಾರಾಟ ಉದ್ಘಾಟನೆ
ಉಡುಪಿ, ಡಿ.20: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆಎಸ್‌ಐಸಿ)ದ ಉತ್ಕೃಷ್ಟ ಗುಣಮಟ್ಟದ ಹಾಗೂ ವೈವಿಧ್ಯಮಯ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟವನ್ನು ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಇಂದು ಬೆಳಗ್ಗೆ ಜೋಡುಕಟ್ಟೆಯಲ್ಲಿರುವ ಡಯಾನ ಹೊಟೇಲ್ ಸಭಾಂಗಣದಲ್ಲಿ ಉದ್ಘಾಟಿಸಿದರು.
ಕರ್ನಾಟಕದ ಪಾರಂಪರಿಕ ಉತ್ಪನ್ನಗಳಾದ ಮೈಸೂರು ಸಿಲ್ಕ್ ಸೀರೆಗಳ ಈ ಪ್ರದರ್ಶನ ಹಾಗೂ ಮಾರಾಟ ಮೇಳ ಇಂದಿನಿಂದ ಮೂರು ದಿನಗಳ ಕಾಲ (ಡಿ.20ರಿಂದ 23ರವರೆಗೆ) ಇಲ್ಲಿ ನಡೆಯಲಿದೆ. ಇದರಲ್ಲಿ ಸಾಂಪ್ರದಾಯಿಕ ಮೈಸೂರು ರೇಷ್ಮೆ ಸೀರೆಗಳಲ್ಲದೇ, ಕೆಎಸ್‌ಐಸಿ ಈಗ ಹೊಸದಾಗಿ ವಿನ್ಯಾಸ ಗೊಳಿಸಿರುವ ನಾಜೂಕಿನ ‘ಕ್ರೇಪ್ ಡಿ ಚೈನ್’ ಸೀರೆಗಳು, ಜಾರ್ಜೆಟ್ ಹಾಗೂ ಸಾದಾ ಮುದ್ರಿತ ಸೀರೆಗಳು ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕಿವೆ ಎಂದು ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಭಾನುಪ್ರಕಾಶ್ ತಿಳಿಸಿದರು.
ಇಲ್ಲಿ ಮಾರಾಟಕ್ಕಿಟ್ಟಿರುವ ಪ್ರತಿ ವಸ್ತುಗಳ ಮೇಲೆ ಶೇ.15ರಿಂದ 25ರಷ್ಟು ರಿಯಾಯಿತಿಗಳನ್ನು ನೀಡಲಾಗುವುದು. ರಿಯಾಯಿತಿಯ ಬಳಿಕ 12,000ರೂ. ಗಳಿಂದ ಸುಮಾರು ಒಂದು ಲಕ್ಷ ರೂ.ವೌಲ್ಯದ ವೈವಿಧ್ಯಮಯ ವಿನ್ಯಾಸ ಹಾಗೂ ಬಣ್ಣದ ಸೀರೆಗಳ ಸಂಗ್ರಹ ಇಲ್ಲಿದೆ ಎಂದವರು ತಿಳಿಸಿದರು.
ದೇಶದಲ್ಲಿ ದೊರೆಯುವ ವಿವಿಧ ಬಗೆಯ ರೇಷ್ಮೆ ವಸ್ತ್ರಗಳಿಗಿಂತ ಮೈಸೂರು ಸಿಲ್ಕ್ ವಿಭಿನ್ನವಾಗಿದೆ. ಹಳೆ ಮೈಸೂರು ಪ್ರದೇಶಗಳಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆ ಎಳೆಗಳಿಂದ ಇವುಗಳು ಮಾಡಲ್ಪಟ್ಟಿವೆ. ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಹಾಗೂ ಬೌಗೋಳಿಕ ಸುವಾಸನೆಯನ್ನು ನೀಡಿದೆ. ಬಟ್ಟೆಗಳ ನೇಯುವಿಕೆಯಲ್ಲೂ ಸಾಂಪ್ರದಾಯಿಕ ಪದ್ಧತಿಯನ್ನು ಅಳವಡಿಸಿಕೊಳ್ಳ ಲಾಗಿದೆ. ಪರಿಶುದ್ಧ ರೇಷ್ಮೆ ಹಾಗೂ ಪರಿಶುದ್ಧ ಚಿನ್ನದಿಂದ ಈ ವಿಶಿಷ್ಟ ಸೀರೆಗಳು ನಿರ್ಮಾಣಗೊಳ್ಳುತ್ತಿವೆ ಎಂದು ಭಾನುಪ್ರಕಾಶ್ ತಿಳಿಸಿದರು.
ಇಲ್ಲಿ ನವನವೀನ ‘ವಿವಾಹ ಸೀರೆಗಳ ಸಂಗ್ರಹ’ವೂ ಲಭ್ಯವಿದೆ. ಇವುಗಳೊಂದಿಗೆ ಪುರುಷರಿಗಾಗಿ ರೇಷ್ಮೆ ಪಂಚೆ ಮತ್ತು ಶಲ್ಯ, ಶರ್ಟ್‌ಗಳು, ಟೈ ಹಾಗೂ ಸ್ಕಾರ್ಫ್‌ಗಳ ಸಂಗ್ರಹವೂ ಇದ್ದು, ಕುಟುಂಬದ ಎಲ್ಲರನ್ನೂ ಆಕರ್ಷಿಸುವ ಉತ್ಪನ್ನಗಳ ಸಂಗ್ರಹವಿದೆ ಎಂದು ಮ್ಯಾನೇಜರ್ ರಘುರಾಮ್ ತಿಳಿಸಿದರು.
ಮೈಸೂರು ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ನಡೆಯಲಿದೆ ಎಂದು ರಘುರಾಮ್ ನುಡಿದರು.