ಕೊಂಕಣ ರೈಲಿನಲ್ಲಿ ಕಳೆದುಕೊಂಡ ಬ್ಯಾಗ್ ಮರಳಿ ಪಡೆದ ಪ್ರವಾಸಿ ವಿದೇಶಿ ಮಹಿಳೆ
ಉಡುಪಿ, ಡಿ.20: ಭಾರತದ ಪ್ರವಾಸಕ್ಕೆ ಆಗಮಿಸಿದ ಆಸ್ಟ್ರೇಲಿಯ ಮೆಲ್ಬೋರ್ನ್‌ನ ಐಮ್ಮಿ ಲೋಮಾಕ್ಸ್ ಎಂಬ ಮಹಿಳೆ ಗಡಿಬಿಡಿಯಲ್ಲಿ ಮಂಗಳೂರಿಗೆ ತೆರಳುವ ರೈಲಿನಲ್ಲಿ ಬಿಟ್ಟಿದ್ದ ತನ್ನ ಅಮೂಲ್ಯ ವಸ್ತುಗಳಿದ್ದ ಬ್ಯಾಗ್‌ನ್ನು ಕೊಂಕಣ ರೈಲ್ವೆ ಅಧಿಕಾರಿಗಳು ಕಾರವಾರದಲ್ಲಿ ಪತ್ತೆ ಹಚ್ಚಿ ಮತ್ತೆ ಮಹಿಳೆಗೆ ಹಿಂದಿರುಗಿಸಿದ ಘಟನೆ ಮಡಗಾಂವ್‌ನಲ್ಲಿ ಸೋಮವಾರ ನಡೆದಿದೆ.
ಮಡಗಾಂವ್‌ನಲ್ಲಿ ಮುಂಬೈಗೆ ತೆರಳುವ ರೈಲು ಏರಬೇಕಾಗಿದ್ದ ಇವರು, ಗಡಿಬಿಡಿಯಲ್ಲಿ ಮಂಗಳೂರಿಗೆ ತೆರಳುವ ಸಿಎಸ್‌ಎಂಟಿ-ಮಂಗಳೂರು ಎಕ್ಸ್‌ಪ್ರೆಸ್ ರೈಲಿಗೇರಿದ್ದರು. ಅವರಿಗೆ ತಮ್ಮ ತಪ್ಪು ಗೊತ್ತಾಗುವಷ್ಟರಲ್ಲಿ ರೈಲು ಚಲಿಸಲಾರಂಭಿಸಿತ್ತು. ಮತ್ತೆ ಗಡಿಬಿಡಿಯಲ್ಲಿ ಅವರು ಬ್ಯಾಗ್‌ನ್ನು ಬಿಟ್ಟು ಚಲಿಸುವ ರೈಲಿನಿಂದ ಕೆಳಗೆ ಧುಮುಕಿದ್ದರು. ಕೆಳಗಿಳಿದ ಮೇಲೆ ಅವರಿಗೆ ಬ್ಯಾಗ್‌ನ್ನು ರೈಲಿನಲ್ಲಿ ಬಿಟ್ಟಿರುವುದು ಅರಿವಿಗೆ ಬಂತು.
ಆತಂಕದ ಮನಸ್ಥಿತಿಯಲ್ಲಿ ಅವರು ಮಡಗಾಂವ್‌ನ ರೈಲ್ವೆ ಪೊಲೀಸ್ ಪಡೆಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ರೈಲು ನಿಲ್ದಾಣದ ದ್ರತಾ ನಿಯಂತ್ರಣ ಕೊಠಡಿ, ಕೊಂಕಣ ರೈಲ್ವೆಯ ಪ್ರಧಾನ ಕಚೇರಿಗೆ ಮಾಹಿತಿ ತಲುಪಿಸಿತು. ಅಲ್ಲಿಂದ ಕಾರವಾರದ ರೈಲ್ವೆ ಪೊಲೀಸರಿಗೆ ಮಾಹಿತಿ ಹೋಗಿ, ಮಹಿಳೆಯ ಬ್ಯಾಗ್‌ಗಾಗಿ ರೈಲಿನಲ್ಲಿ ಹುಡುಕುವಂತೆ ಸೂಚನೆ ನೀಡಲಾಯಿತು.
ಮಾಹಿತಿ ಪಡೆದ ಕಾರವಾರ ರೈಲ್ವೆ ಪೊಲೀಸ್ ರೂಪಾ ನಾಯಕ್ ಅವರು ರೈಲು ಕಾರವಾರಕ್ಕೆ ಬಂದಾಗ ತಕ್ಷಣ ಬೋಗಿಗೆ ತೆರಳಿ ಹುಡುಕಿದಾಗ ಐಮ್ಮಿ ಅವರಿಟ್ಟ ಸ್ಥಳದಲ್ಲಿ ಬೆನ್ನಿಗೆ ಹಾಕುವ ಬ್ಯಾಗ್ ಇರುವುದು ಕಂಡುಬಂತು. ರೂಪಾ ನಾಯಕ್ ಬ್ಯಾಗ್‌ನ್ನು ಪಡೆದು ಮುಂಬೈ ಕಚೇರಿಗೆ ಮಾಹಿತಿ ನೀಡಿದರು. ಬ್ಯಾಗ್ ಕಳೆದುಕೊಂಡ ಮಹಿಳೆಗೂ ಅದು ಸಿಕ್ಕಿರುವ ಬಗ್ಗೆ ಮಾಹಿತಿ ನೀಡಲಾಯಿತು.
ಮಡಗಾಂವ್‌ನಿಂದ ಮುಂಬೈಗೆ ತೆರಳಲು ಮಾಂಡೋವಿ ಎಕ್ಸ್‌ಪ್ರೆಸ್ ರೈಲು ಏರಬೇಕಿದ್ದ ಐಮ್ಮಿ, ವಿರುದ್ಧ ದಿಕ್ಕಿಗೆ ತೆರಳುವ ಸಿಎಸ್‌ಐಟಿ-ಮಂಗಳೂರು ರೈಲನ್ನೇರಿದ್ದರು. ತಕ್ಷಣ ಅವರನ್ನು ಕಾರವಾರಕ್ಕೆ ತೆರಳಿ ಬ್ಯಾಗ್‌ನ್ನು ಪಡೆದುಕೊಳ್ಳುವಂತೆ ತಿಳಿಸಲಾಯಿತು. ಬ್ಯಾಗ್‌ನಲ್ಲಿ ಆಕೆಯ ಪಾಸ್‌ಪೋರ್ಟ್, ಆ್ಯಪಲ್ ಐಪ್ಯಾಡ್, ಸೋನಿ ಕೆಮರಾ, 3,300ರೂ. ಭಾರತೀಯ ಕರೆನ್ಸಿ, ಇದ್ದು, ಇವುಗಳ ಒಟ್ಟು ಮೌಲ್ಯ ಒಂದು ಲಕ್ಷ ರೂ.ಗಳಿಗೂ ಅಧಿಕವಿತ್ತು. ಕೂಡಲೇ ಕಾರವಾರಕ್ಕೆ ಬಂದು ತನ್ನ ಬ್ಯಾಗ್‌ನ್ನು ಪಡೆದುಕೊಂಡರು.
ಅಂದೇ ರಾತ್ರಿ ಮುಂಬೈಯಿಂದ ಆಸ್ಟ್ರೇಲಿಯಕ್ಕೆ ಮರಳಬೇಕಾಗಿದ್ದ ಐಮ್ಮಿ, ಕೊಂಕಣ ರೈಲ್ವೆ ಅಧಿಕಾರಿಗಳಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿ, ಲಭ್ಯವಿದ್ದ ಮುಂದಿನ ರೈಲಿನಲ್ಲಿ ಕಾರವಾರದಿಂದ ಮುಂಬೈಗೆ ಪ್ರಯಾಣ ಬೆಳೆಸಿದರು ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.