×
Ad

ಕ್ರಿಸ್ಮಸ್ ಪ್ರೀತಿ, ದಯೆ, ಶಾಂತಿ, ಸೋದರತ್ವ ಸಾರುವ ಹಬ್ಬ

Update: 2017-12-20 22:18 IST

 ಉಡುಪಿ, ಡಿ.20: ದೇವಪುತ್ರ ಯೇಸುಕ್ರಿಸ್ತರು ಭೂಲೋಕದಲ್ಲಿ ಅವತರಿಸಿ ದೀನ ಮಾನವರಾದರು. ದೇವ ಹಾಗೂ ಮಾನವನ ನಡುವೆ ಸತ್ಸಂಬಂಧ ಬೆಳೆಸುವ, ಮಾನವರ ಮಧ್ಯೆ ಪ್ರೀತಿ ಸಂಬಂಧವನ್ನು ಅರಳಿಸಲು ಕಾರಣರಾ ದರು. ಇದೇ ಪ್ರೀತಿ, ದಯೆ, ಶಾಂತಿ, ಸೋದರತ್ವಗಳನ್ನು ಕ್ರಿಸ್ತ ಜಯಂತಿ ಅಥವಾ ಕ್ರಿಸ್ಮಸ್ ಹಬ್ಬವು ಸಾರುತ್ತದೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಲೋಬೊ ಹೇಳಿದ್ದಾರೆ.

ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ಅವರು, ಕ್ರಿಸ್ತರ ಜನನ ಈ ಭೂಲೋಕದ ಸಕಲ ಮನುಜರ ಆನಂದಕ್ಕೆ ಕಾರಣವಾಯಿತು. ಅವರ ಜನನವು ಅಮರ ಪ್ರೇಮದ ರಹಸ್ಯವಾಗಿದೆ. ತಂದೆ ದೇವರು ಮಾನವನ ಮೇಲಿನ ಪ್ರೀತಿಯನ್ನು ತೋರ್ಪ ಡಿಸಲು ತಮ್ಮ ಪುತ್ರರನ್ನೇ ಭೂಲೋಕಕ್ಕೆ ಕಳುಹಿಸಿದ ಮಾನವ ಚರಿತ್ರೆಯ ಅದ್ವಿತೀಯ ಘಟನೆ ಕ್ರಿಸ್ಮಸ್ ಎಂದರು.

ಅನಾದರಣೆ, ಜಾತೀಯತೆ ಮತ್ತು ಭಯೋತ್ಪಾದನೆ, ಹಿಂಸೆ, ರಕ್ತಪಾತ ಮತ್ತು ಅನಿಶ್ಚಿತತೆಯ ವಾತಾವರಣಕ್ಕೆ ಎಡೆಮಾಡಿಕೊಡುವ ದುರಂತಮಯ ಪರಿಸ್ಥಿತಿಯಲ್ಲೂ ಅಪನಂಬಿಕೆ, ಅನುಮಾನ ಮತ್ತು ನಿರಾಶೆಗೆ ಶರಣಾಗಬೇಡಿ ಎಂದು ಬೆತ್ಲೆಹೇಮಿನ ಬಡ ಗೋದಲಿಯು ಭೂಲೋಕಕ್ಕೆ ಇಂದು ಹೇಳುತ್ತಿದೆ. ಸಕಲ ಧರ್ಮಗಳ ವಿಶ್ವಾಸಿಗಳು ಸುಮನಸ್ಸಿನ ಸ್ತ್ರೀಪುರುಷರು ಒಂದಾಗಿ ಎಲ್ಲಾ ವಿಧದ ಅಸಹನೆ ಮತ್ತು ತಾರತಮ್ಯವನ್ನು ಬಹಿಷ್ಕರಿಸಿ ಶಾಂತಿಯನ್ನು ಸ್ಥಾಪಿಸುವ ಕರೆಯನ್ನು ಹೊಂದಿದ್ದಾರೆ. ಕ್ರಿಸ್ಮಸ್ ಆಚರಣೆಯು ಸಂತೋಷ, ಪ್ರೀತಿ ಮತ್ತು ಶಾಂತಿಗಾಗಿ ಶ್ರಮಿಸುವ ಎಲ್ಲರಿಗೂ ಉತ್ತೇಜನ ಕೊಡುವಂತಾಗಲಿ ಎಂದು ಅವರು ಹಾರೈಸಿದರು.

ಕ್ರಿಸ್ಮಸ್ ಹಬ್ಬವು ನಮ್ಮೆಲ್ಲರಿಗೂ ಪ್ರೀತಿ ಹಾಗೂ ಸುಖಶಾಂತಿಯ ಹಬ್ಬವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರೂ ಹಳೆತನವನ್ನು ಬಿಟ್ಟು ಕ್ರಿಸ್ತರಂತೆ ತ್ಯಾಗ ತನ್ಮಯರಾಗಿ, ಸೇವಾ ಮನೋಭಾವವನ್ನು ಮನನ ಮಾಡಿಕೊಂಡು, ನಿಸ್ವಾರ್ಥಿಗಳಾಗಿ ಪ್ರೀತಿ, ದಯೆ, ಕರುಣೆಯ ಭಾಷೆಯನ್ನು ನಾವು ಮೊದಲು ಕಲಿತು, ಇತರರಿಗೂ ಅದನ್ನು ಕಲಿಸಲು ಕಂಕಣಬದ್ಧರಾಗಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News