ಡಿ.29-30ರಂದು ಕೋಟೇಶ್ವರ ಬೀಚ್ ಉತ್ಸವ
ಕುಂದಾಪುರ, ಡಿ. 20: ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕುಂದಾಪುರ ಪುರಸಭೆ, ಬೀಜಾಡಿ, ಕೋಟೇಶ್ವರ ಗ್ರಾ.ಪಂ. ಹಾಗೂ ಸ್ಥಳೀಯ ಯುವಕ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಕೋಟೇಶ್ವರದ ಕಿನಾರ ಬೀಚ್ ನಲ್ಲಿ ‘ಊರ್‌ಮನಿ ಹಬ್ಬ’ ಎಂಬ ಬೀಚ್ ಉತ್ಸವವನ್ನು ಡಿ.29 ಮತ್ತು 30 ರಂದು ಆಯೋಜಿಸಲಾಗಿದೆಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಡಿ.29ರಂದು ಬೆಳಗ್ಗೆ 10 ಗಂಟೆಗೆ ಉತ್ಸವದ ಉದ್ಘಾಟನೆ ನಡೆಯಲಿದೆ. ಸಂಜೆ 5 ಗಂಟೆಗೆ ಸಾಂಸ್ಕತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಡಿ.30ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾಂಭ ಜರಗಲಿದೆ ಎಂದು ಹೇಳಿದರು.
ಡಿ.29ರಂದು ಹೌಂದರಾಯನ ವಾಲ್ಗವೆ, ಭಜನಾ ಕುಣಿತ, ದಫ್ ಕುಣಿತ, ಕ್ಯಾರಲ್ಸ್ ನೃತ್ಯ ಪ್ರದರ್ಶನ, ನಾಟಕ, ಸಂಗೀತ ಕಾರ್ಯಕ್ರಮ, ಡಿ.30ರಂದು ಹೂವಿನ ಕೋಲು, ಯಕ್ಷಗಾನ, ಜಾದೂ ಪ್ರದರ್ಶನ, ನೃತ್ಯ ಪ್ರದರ್ಶನ ನಡೆಯ ಲಿದೆ. ಮರಳು ಶಿಲ್ಪ, ಛಾಯಾಚಿತ್ರ, ಚಿತ್ರಕಲೆ, ಕಂಬಳ, ಕೋಳಿ ಪಡೆ, ಹಳೆ ಕಾಲದ ವಸ್ತುಗಳ ಪ್ರದರ್ಶನವಿದ್ದು, ಲ್ಯಾಂಬಿ ರಿಕ್ಷಾ, ಎತ್ತಿನ ಗಾಡಿಯ ಜಾಲಿ ರೈಡ್ ಕೂಡ ಕಲ್ಪಿಸಲಾಗಿದೆ.
ಹಗ್ಗಜಗ್ಗಾಟ ಹಾಗೂ ವಾಲಿಬಾಲ್‌ನಲ್ಲಿ ನೋಂದಾಯಿತ ಸಂಘ-ಸಂಸ್ಥೆ ಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಚಿತ್ರಕಲೆ ಸ್ಪರ್ಧೆಗಳನ್ನು 1ರಿಂದ 4(ಐಚ್ಛಿಕ ವಿಷಯ) ಹಾಗೂ 5ರಿಂದ 7ನೆ ತರಗತಿ(ನಮ್ಮೂರ ಹಬ್ಬ) ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ. 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸೇವ್ ವಾಟರ್ ವಿಷಯವಾಗಿ ಮರಳು ಶಿಲ್ಪಸ್ಪರ್ಧೆ ನಡೆಯಲಿದ್ದು, ತಂಡದಲ್ಲಿ ಐವರಿಗೆ ಅವಕಾಶ ನೀಡಲಾಗಿದೆ.
ಛಾಯಾಗ್ರಾಹಣದಲ್ಲಿ ಆನ್‌ಲೈನ್ ಹಾಗೂ ಆಪ್‌ಲೈನ್ ವಿಭಾಗದ ಸ್ಪರ್ಧೆ ಏರ್ಪಡಿಸಲಾಗಿದ್ದು, ಕುಂದಾಪುರ ಪ್ರವಾಸೋದ್ಯಮ ಸಂಬಂಧ ಪ್ರಸಿದ್ದಿಗೆ ಬಾರದ ಸ್ಥಳಗಳ ವಿಷಯವನ್ನು ನೀಡಲಾಗಿದೆ. ಡಿ.27ರಂದು ಕೋಟೇಶ್ವರ ಸರಕಾರಿ ಪ.ಪೂ.ಕಾಲೇಜಿನಲ್ಲಿ ಪ.ಪೂ.ವಿದ್ಯಾರ್ಥಿಗಳಿಗೆ ‘ಪ್ರವಾಸೋದ್ಯಮ ಪ್ರಗತಿಗೆ ನಾವೇನು ಮಾಡಬೇಕು’ ವಿಷಯದ ಕುರಿತ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಡಿ.23 ಹೆಸರು ನೊಂದಾಯಿಸಲು ಅಂತಿಮ ದಿನ ವಾಗಿದೆ.
ಛದ್ಮವೇಷ ಹಾಕಿ ಸೆಲ್ಫಿ ತೆಗೆಸಿಕೊಂಡು, ಉತ್ತಮ ವೇಷಕ್ಕೆ ಬಹುಮಾನ ನೀಡ ಲಾಗುವುದು. ವಿಶೇಷ ಆಕರ್ಷಣೆಯಾಗಿ ಬೋಟಿಂಗ್, ಹೆಲಿಕಾಪ್ಟರ್ ರೈಡ್, ತ್ರಿಲ್ಲಿಂಗ್ ರೈಡ್ಸ್, ಗಾಳಿಪಟ ಉತ್ಸವ, ಕರಾವಳಿ ಸೆಲಿ ಬೂತ್ ಕೂಡ ಇದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಆನಂದ ಸಿ.ಕುಂದರ್, ಸುಬ್ರಹ್ಮಣ್ಯ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.