ಕಿನ್ನಿಗೋಳಿ: ವಿವಿಧ ಕಾಮಗಾರಿಗಳು ಲೋಕಾರ್ಪಣೆ

Update: 2017-12-20 17:26 GMT

ಕಿನ್ನಿಗೋಳಿ, ಡಿ. 20: ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಗೊಂಡ ವಿವಿಧ ಕಾಮಗಾರಿಗಳನ್ನು ಮಾಜೀ ಸಚಿವ , ಮುಲ್ಕಿ-ಮೂಡುಬಿದಿರೆ ಶಾಸಕ ಭಯಚಂದ್ರ ಜೈನ್, ಗ್ರಾಮ ಪಂಚಾಯತ್‌ನ ಮಾರ್ಕೆಟ್ ಕಟ್ಟಡದ ಅವರಣದಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿದರು.

ಕಿನ್ನಿಗೋಳಿ ಗ್ರಾಮ ಪಂಚಾಯತ್‌ನ ಮಾರ್ಕೆಟ್ ಕಟ್ಟಡದ ಅವರಣದಲ್ಲಿ 49 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಎರಡನೇ ಹಂತದ ಪಂಚಾಯತ್ ವಾಣಿಜ್ಯ ಸಂಕೀರ್ಣ ಕಟ್ಟಡ, 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೇಂದ್ರ ಬಸ್ಸು ನಿಲ್ದಾಣ, ಪೊಲೀಸ್ ಸಹಾಯ ಕೇಂದ್ರ ಹಾಗೂ ರಿಕ್ಷಾ ನಿಲ್ದಾಣ ಮತ್ತು 36 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಿತ್ತುಲ್ ದ್ರವ ತ್ಯಾಜ್ಯ ಘಟಕ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಕಿನ್ನಿಗೋಳಿಯ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನಡೆದು ಗುತ್ತಿಗೆರಾದರ ತಾಂತ್ರಿಕ ದೋಷದಿಂದಾಗಿ ನಿಧಾನ ಗತಿಯೊಂದಿಗೆ ಸಾಗಿ ವಿಳಂಬವಾಗಿದೆ.

ಈ ಬಾರಿ ಸಿದ್ದರಾಮಯ್ಯ ಅವರಲ್ಲಿ ವಿನಂತಿಸಿ ಕಾಮಗಾರಿ ಪುನಾರಂಭಕ್ಕೆ ಮತ್ತೆ ಎರಡು ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್‌ಗಳನ್ನು ಒಂಗ್ಗೂಡಿಸಿಕೊಂಡು ಕಿನ್ನಿಗೋಳಿ ನಗರ ಪಂಚಾಯತ್ ಮಾಡುವ ಆಲೋಚನೆಗಳನ್ನು ಮಾಡಲಾಗಿದೆ. ಮೂರು ಕಾವೇರಿ ಯಿಂದ ಮುಲ್ಕಿ ಪೇಟೆಯ ವರೆಗೆ ಸುಮಾರು 12 ಕೋಟಿ ರೂ. ವ್ಯಯಿಸಿ ಸುಸಜ್ಜಿತ ರಸ್ತೆ ಅಗಲೀಕರಣ ಮಾಡಲಾಗುವುದು ಎಂದರು.

ಅಲ್ಲದೆ, ಕಿನ್ನಿಗೋಳಿ ಪೇಟೆಯಲ್ಲಿ ಎರಡು ಕೋ.ರೂ. ಭರಿಸಿ ರಸ್ತೆ ಡಾಂಬರೀಕರಣ ಹಾಗೂ ಡಿವೈಡರ್ ಅಳವಡಿಸುವ ಜೊತೆಗೆ ಪಟ್ಟಣದ ದಾರಿಯಲ್ಲಿ ಉನ್ನತ ಮಟ್ಟದ ದಾರಿದೀಪ ಆಳವಡಿಸಿ ಸುಂದರ ಕಿನ್ನಿಗೋಳಿ ಮಾಡಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಸುಜನ್ ಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮಾಜಿ ಜಿಲ್ಲಾ ಪಂಚಾಯತ್ ಅಧಕ್ಷೆ ಸುಗಂಧಿ ಕೊಂಡಾಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಾ ಸಿಕ್ವೇರ, ಕಿನ್ನಿಗೋಳಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲವ ಶೆಟ್ಟಿ , ಪಿಡಿಒ ಅರುಣ್ ಪ್ರದೀಪ್ ಡಿಸೋಜ , ಕಿರಿಯ ಅಭಿಯಂತರರಾದ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸದಂರ್ಭದಲ್ಲಿ ಗುತ್ತಿಗೆದಾರರಾದ ಸಂತೋಷ್ ಕುಮಾರ್ ಹೆಗ್ಡೆ, ಸುಧಾಕರ ಶಿಬರೂರು, ಎಮ್.ಎಸ್. ಅಬ್ದುಲ್ ಹಮೀದ್, ಸುನೀಲ್ ಅಂಚನ್ ಅವರನ್ನು ಗೌರವಿಸಲಾಯಿತು. ಸದಸ್ಯ ಸಂತೋಷ್ ಕುಮಾರ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿಯಿಂದ ಕಾರ್ಯಕ್ರಮಕ್ಕೆ ಬಹಿಷ್ಕಾರ: ಕಿನ್ನಿಗೋಳಿ ಗ್ರಾಮ ಪಂಚಾಯತ್‌ನ ಬಿತ್ತುಲ್ ದ್ರವ ತ್ಯಾಜ್ಯ ಘಟಕಕ್ಕೆ ಕೇಂದ್ರ ಸರಕಾರದ ದಿಂದ ಜಿಲ್ಲಾ ಪಂಚಾಯತ್‌ನ ಮೂಲಕ 20 ಲಕ್ಷ ರೂ. ಹಾಗೂ ನೂತನ ಬಸ್ ನಿಲ್ದಾಣಕ್ಕೆ 1.80 ಲಕ್ಷ ರೂ. ಅನುದಾನ ನೀಡಲಾಗಿದೆ. ಆದರೆ, ಜಿಲ್ಲಾ ಪಂಚಾಯತ್‌ನ ಅನುದಾನವನ್ನು ಕಡೆಗಣಿಸಿ ಗ್ರಾಮ ಪಂಚಾಯತ್ ಅನುದಾನಗಳ ಬಗ್ಗೆ ಅಷ್ಟೇ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಬಹಿಷ್ಕರಿಸಿರುವುದಾಗಿ ಕಿನ್ನಿಗೋಳಿ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News