×
Ad

ಅಂತರ ಕಾಲೇಜು "ನಾಟಕ-ಯಕ್ಷೋತ್ಸವ" ಸ್ಪರ್ಧೆ

Update: 2017-12-21 19:09 IST

ಬಂಟ್ವಾಳ, ಡಿ. 21: ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್ ಮಂಚಿ-ಕುಕ್ಕಾಜೆ ವತಿಯಿಂದ ಕಾರಂತರ ನಾಟಕದ ದಶಮಾನೋತ್ಸವದ ಅಂಗವಾಗಿ ಡಿ.24, 25ರಂದು "ಅಂತರ ಕಾಲೇಜು ನಾಟಕ ಸ್ಪರ್ಧೆ"ಯು ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್‌ನ ಅಧ್ಯಕ್ಷ ಕಜೆ, ರಾಮಚಂದ್ರ ಭಟ್ ಹೇಳಿದ್ದಾರೆ.

ಗುರುವಾರ ಸಂಜೆ ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಿಗ್ಗೆ 9:30ಕ್ಕೆ ಚಿತ್ರ ಕಲಾವಿದ ಶ್ರೀಮೋಹನ ಸೋನ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಒಟ್ಟು ಹತ್ತು ಕಾಲೇಜಿನ ತಂಡಗಳು ಈ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

ಡಿ.25ರಂದು ಸಂಜೆ 5:30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಬಾಸುಮ ಕೊಡಗು, ಯಕ್ಷಧ್ವನಿ ಟ್ರಸ್ಟ್‌ನ ಅಧ್ಯಕ್ಷ ಡಾ.ಕಜೆ ಮಹಾಬಲ ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.

ಯಕ್ಷೋತ್ಸವ

ಡಿ. 31ರಂದು ಅಂತರ ಕಾಲೇಜು ಮಟ್ಟದ ತೆಂಕುತಿಟ್ಟಿನ ಯಕ್ಷಗಾನ ಸ್ಪರ್ಧೆಯು ಮಂಚಿ ಕುಕ್ಕಾಜೆಯ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ನಡೆಯಲಿದೆ.

ಜಿಲ್ಲೆಯ ಐದು ಕಾಲೇಜಿನ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಯಕ್ಷಗಾನ ಸ್ಪರ್ಧೆಯನ್ನು ತಾಲೂಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೆ.ಮೋಹನ್ ರಾವ್ ಉದ್ಘಾಟಿಸುವರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಅಧ್ಯಕ್ಷ ವಹಿಸುವರು ಎಂದರು.

ಸಂಜೆ 6ಕ್ಕೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಗೋವಿಂದ ಭಟ್ ಅವರನ್ನು ಸನ್ಮಾನಿಸಲಾಗುವುದು. ಯಕ್ಷಗಾನ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರಮಾನಂದ ಸಿದ್ಧಕಟ್ಟೆ, ಗಣೇಶ್ ಐತಾಳ್, ರಮೇಶ್ ರಾವ್, ಕೃಷ್ಣಪ್ಪ ಬೆಲ್ಡ, ಮೋಹನ್ ಪ್ರಭು ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News