×
Ad

ಬಂಟ್ವಾಳ ಪುರಸಭೆ: ಮುಂಗಡ ಆಯವ್ಯಯ ಕುರಿತ ಸಾರ್ವಜನಿಕ ಸಮಾಲೋಚನಾ ಸಭೆ

Update: 2017-12-21 19:13 IST

ಬಂಟ್ವಾಳ, ಡಿ. 21:  ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಅಲ್ಲದೆ ರಸ್ತೆಗಳು ತೀರಾ ಹದಗೆಟ್ಟು ಸಂಚಾರಕ್ಕೂ ಅಯೋಗ್ಯವಾಗಿದೆ ಎಂದು ಗುರುವಾರ ನಡೆದ ಬಂಟ್ವಾಳ ಪುರಸಭೆಯ 2018-19ನೆ ಸಾಲಿನ ಮುಂಗಡ ಆಯವ್ಯಯ ಕುರಿತ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಪುರವಾಸಿಗಳು ಆಗ್ರಹಿಸಿದರು.

ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದು, ಈ ಬಗ್ಗೆ ತಿರುಮಲೇಶ್ ಅವರು ವಿಷಯ ಪ್ರಸ್ತಾಪಿಸಿ, ಸಂಚಯಗಿರಿ ಪರಿಸರದಲ್ಲಿ ಹಳೆ ರಸ್ತೆಯನ್ನು ಬಿಟ್ಟು ಹೊಸರಸ್ತೆಯಲ್ಲಿ ಕಾಂಕ್ರಿಟೀಕರಣಗೊಳಿಸಲಾಗುತ್ತಿದೆ. ಅದರಲ್ಲಿ ಪ್ರಭಾವಿ ವ್ಯಕ್ತಿಗಳ ಮನೆ ಮುಂದೆ ಕಾಂಕ್ರಿಟೀಕರಣಗೊಳಿಸಲಾಗುತ್ತಿದೆ. ಅಗೆದು ಹೋದ ರಸ್ತೆಯನ್ನು ಇಲ್ಲಿನ ನಾಗರೀಕ ಸಮಿತಿ ವತಿಯಿಂದ ನಾವೇ ಹಣ ವ್ಯಯ ಮಾಡಿ, ದುರಸ್ಥಿಗೊಳಿಸುವ ಪರಿಸ್ಥಿತಿ ಬಂದಿದೆ ಎಂದರು. ಮುಂದಿನ ಬಜೆಟ್‌ನಲ್ಲಿ ಈ ರಸ್ತೆಯ ಕಾಂಕ್ರೀಟೀಕರಣಕ್ಕೆ ಅನುದಾನ ಮೀಸಲಿಡುವಂತೆ ಒತ್ತಾಯಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಇಂಜಿನಿಯರ್ ಡೊಮೆನಿಕ್ ಡಿಮೊಲ್ಲೊ ಮಾತನಾಡಿ, ಸಮಗ್ರ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲ ರಸ್ತೆಗಳನ್ನು ದುರಸ್ಥಿಗೊಳಿಸಲಾಗುವುದು. ಅಷ್ಟರವರೆಗೆ ಸಾರ್ವಜನಕರು ತಾಳ್ಮೆಯಿಂದ ನಮ್ಮೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಬೊಂಡಾಲ ಪರಿಸರದಲ್ಲಿ ವ್ಯಕ್ತಿಯೊಬ್ಬರು ಪೈಪ್‌ಲೈನ್‌ಗೆ ಅಕ್ರಮವಾಗಿ ಪಂಪ್ ಅಳವಡಿಸಿ ನೀರು ಎತ್ತುತಿದ್ದಾರೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ತಿರುಮಲೇಶ್ ಅವರು ದೂರಿದರು. ತಕ್ಷಣ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ಭರವಸೆ ನೀಡಿದರು.

ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಬಿ.ಸಿ.ರೋಡ್ ಸಂಚಯಗಿರಿಯ ಹಿರಿಯ ನಾಗರಿಕ ದಾಮೋದರ್ ಅವರು ವಿಷಯ ಪ್ರಸ್ತಾಪಿಸಿ, ಇತ್ತೀಚಿನ ದಿನಗಳಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಕಸದೊಂದಿಗೆ ಪ್ಲಾಸ್ಟಿಕ್ ಚೀಲಗಳು ಮಿಶ್ರಣವಾ ಗುತ್ತಿದ್ದು, ಇದರಿಂದ ಪರಿಸರಕ್ಕೆ ಕಟ್ಟ ಪರಿಣಾಮ ಬೀರುತ್ತಿದೆ ಎಂದು ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ನಿವೃತ್ತ ಪುರಸಭಾ ಅಧಿಕಾರಿ ಶಿವಂಕರ್, ಮಡಿಕೇರಿಯಂತಹ ನಗರಗಳಲ್ಲಿ ಶೇ.80ರಷ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ನಿಟ್ಟಿನಲ್ಲಿ ಇಲ್ಲಿಯೂ ಕೂಡಾ ಪುರಸಭೆಯ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಅಂಗಡಿಗಳಿಗೆ ದಾಳಿ ಮಾಡಿ, ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ಗಳನ್ನು ನಿಷೇಧಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಈಬಗ್ಗೆ ಹಿಂದಿನಿಂದಲೂ ಅಂಗಡಿಗಳಿಗೆ ದಾಳಿ ಮಾಡಿ ಪ್ಲಾಸ್ಟಿಕ್ ಪತ್ತೆ ಹಚ್ಚಿದಂಡ ವಿಧಿಸಲಾಗಿದೆ. ಆದರೆ ಇದು ಪರಿಣಾಕಾರಿಯಾಗಿಲ್ಲ. ಈ ಕುರಿತು ಜನರೇ ಅರಿತುಕೊಂಡು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದವರು, ಪೇಪರ್ ಬ್ಯಾಗ್ ಹಾಗೂ ಬಟ್ಟೆ ಚೀಲಗಳ ತಯಾರಿಕಾ ಘಟಕ ಸ್ಥಾಪಿಸಲು ಮುಂದಾಗುದಾದಲ್ಲಿ ಅವರಿಗೆ ಪುರಸಭೆಯಿಂದ ಸಹಾಯ ಧನ ನೀಡಲಾಗುವುದು ಎಂದರು.

ಶೀಫ್ರ ಪೈರೋಲಿಸ್ ಯಂತ್ರ ಅಳವಡಿಸಿಕೆ

ಪುರಸಭಾ ವ್ಯಾಪ್ತಿಯಲ್ಲಿ ಕಸಸಂಗ್ರಹ ಕೆಲಸ ಉತ್ತಮವಾಗಿ ನಡೆಯುತ್ತಿದೆ. ಆದರೆ ಇದರ ವಿಲೇವಾರಿಗೆ ಸ್ವಂತನೆಲೆಯಲ್ಲಿ ತ್ಯಾಜ್ಯ ಘಟಕ ಆರಂಭಿಸುವುದು ಸೂಕ್ತ ಎಂದು ಶಿವಸುಂದರ್ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು, ಕಂಚಿನಡ್ಕಪದವಿನಲ್ಲಿ ನಿರ್ಮಾಣ ಹಂತದಲ್ಲಿರವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮುಂದಿನ ತಿಂಗಳೇ ಪೈರೋಲಿಸ್ ಯಂತ್ರವನ್ನು ಅಳವಡಿಸಿ, ಕಸವಿಲೇವಾರಿಗೆ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ರಸ್ತೆಗಳು ತೀರಾ ಹದಗೆಟ್ಟು ಸಂಚಾರಕ್ಕೂ ಅಯೋಗ್ಯವಾಗಿದೆ ಎಂದು ತಿರುಮಲೇಶ್ ಎಂದು ಸಭೆಯ ಗಮನಸೆಳೆದರೆ, ಸಂಚಯಗಿರಿ ಪರಿಸರದಲ್ಲಿ ಹಳೆ ರಸ್ತೆಯನ್ನು ಬಿಟ್ಟು ಹೊಸ ರಸ್ತೆಯಲ್ಲಿ ಕಾಂಕ್ರಿಟೀಕರಣಗೊಳಿಸಲಾಗುತ್ತಿದೆ. ಅದರಲ್ಲಿ ಪ್ರಭಾವಿ ವ್ಯಕ್ತಿಗಳ ಮನೆ ಮುಂದೆ ಕಾಂಕ್ರೀಟೀಕರಣಗೊಳಿಸಲಾಗುತ್ತಿದೆ. ಅಗೆದುಹೋದ ರಸ್ತೆಯನ್ನು ಇಲ್ಲಿನ ನಾಗರೀಕ ಸಮಿತಿ ವತಿಯಿಂದ ನಾವೇ ಹಣ ವ್ಯಯ ಮಾಡಿ, ದುರಸ್ಥಿಗೊಳಿಸುವ ಪರಿಸ್ಥಿತಿ ಬಂದಿದೆ ಎಂದು ಸಂಚಯಗಿರಿಯ ನಾಗರೀಕ ಸಮಿತಿಯ ಉಪಾಧ್ಯಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೆ, ಮುಂದಿನ ಬಜೆಟ್‌ನಲ್ಲಿ ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ಅನುದಾನ ಮೀಸಲಿಡುವಂತೆ ಒತ್ತಾಯಿಸಿದರು.

ಪುಟ್‌ಪಾತ್ ಸಮಸ್ಯೆ

ಪುರಸಭಾ ವ್ಯಾಪ್ತಿಯಲ್ಲಿ ಪಾದಚಾರಿಗಳಿಗೆ ಪುಟ್‌ಪಾತ್ ವ್ಯವಸ್ಥೆಯಿಲ್ಲದ ಹಾಗೂ ಕಿಷ್ಕಿಂದೆಯಂತಿರುವ ಬಂಟ್ವಾಳ ಪೇಟೆ ರಸ್ತೆ ಅಗಲೀಕರಣದ ಕುರಿತಾಗಿ ಈ ಹಿಂದಿನ ಎರಡೂ ಮುಂಗಡ ಆಯವ್ಯಯ ಸಮಾಲೋಚನಾ ಸಭೆಯಲ್ಲಿ ಪ್ರಸ್ತಾಪಿಸಿದರೂ ಈವರೆಗೂ ಯಾವುದೇ ಕ್ರಮ ಹಾಗೂ ಆಸಕ್ತಿ ವಹಿಸದ ಬಗ್ಗೆ ಪತ್ರಕರ್ತರೊಬ್ಬರು ಸಭೆಯ ಗಮನಕ್ಕೆ ತಂದಾಗ, ಇದಕ್ಕೆ ಅಧ್ಯಕ್ಷರಾಗಲೀ, ಮುಖ್ಯಾಧಿಕಾರಿಯಾಗಲೀ, ಯಾವುದೇ ಉತ್ತರ ನೀಡದೇ ವಿಷಯಾಂತರಿಸಿದರು.

ಹಿಂದೂರುಧ್ರಭೂಮಿಯ ಅವ್ಯವಸ್ಥೆ

 ಬಿ.ಸಿ.ರೋಡ್‌ನ ಕೈಕುಂಜೆಯಲ್ಲಿರುವ ಹಿಂದೂರುಧ್ರಭೂಮಿಯ ಸ್ಥಿತಿ ಶೋಚನೀಯವಾಗಿದೆ. ಇದರ ಛಾವಣಿಯು ಶಿಥಿಲಾವ್ಯವಸ್ಥೆಯಲ್ಲಿದ್ದರೆ ಇದರೊಳಗಿನ ವಿದ್ಯುತ್ ದೀಪಗಳು, ದಾರಿದೀಪಗಳು ಉರಿಯುತ್ತಿಲ್ಲ. ರಸ್ತೆಕೂಡಾ ಸಂಪೂರ್ಣ ಹದಗೆಟ್ಟಿದ್ದು, ಶವಸಂಸ್ಕಾರದ ಸಿಲಿಕಾನ್ ಕೂಡಾ ಸರಿಯಿಲ್ಲ. ಒಟ್ಟು ರುಧ್ರಭೂಮಿಯ ವ್ಯವಸ್ಥೆಯೇ ಕೆಟ್ಟುಹೋಗಿದೆ. ಅಲ್ಲದೆ ಇಲ್ಲಿನ ರುಧ್ರಭೂಮಿ ಅಭಿವೃದ್ಧಿ ಸಮಿತಿಯೂ ಕಾರ್ಯಾಚರಿಸತ್ತಿದ್ದು, ಕಳೆದ ಆರು ತಿಂಗಳಿನಿಂದ ಶವ ಸಂಸ್ಕಾರ ನಡೆಯುತ್ತಿಲ್ಲ. ಸಂಸ್ಕಾರಕ್ಕಾಗಿ ಬಂಟ್ವಾಳ ಇಲ್ಲವೇ ಪಾಣೆಮಂಗಳೂರಿಗೆ ಮೃತದೇಹವನ್ನು ಒಯ್ಯಲಾಗುತ್ತಿದೆ ಎಂದು ಸೇಸಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ ಪೆರ್ನೆ ಅವರನ್ನೊಳಗೊಂಡ ನಿಯೋಗ ಅಧ್ಯಕ್ಷರಿಗೆ ಲಿಖಿತ ಮನವಿ ಸಲ್ಲಿಸಿ, ಕೈಕುಂಜೆ ಹಿಂದೂರುಧ್ರ ಭೂಮಿಯನ್ನು ಸುಸ್ಥಿತಿಗೆ ತರುವಂತೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು, ಶೀಫ್ರದಲ್ಲಿಯೇ ಅಭಿವೃದ್ಧಿ ಸಮಿತಿಯನ್ನು ರಚಿಸಿ ರುಧ್ರಭೂಮಿಯ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ಜಗದೀಶ್ ಕುಂದರ್, ಬಜೆಟ್ ತಯಾರಿಕಾ ಸಿಬ್ಬಂದಿ ಸುಷ್ಮಾ, ರಝಾಕ್, ಸ್ವ ಸಹಾಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News