×
Ad

ಕರಾವಳಿಯ ಕೃಷಿಕರಿಗೆ ಸರಕಾರ ನೆರವು: ಸಚಿವ ರಮಾನಾಥ ರೈ

Update: 2017-12-21 20:05 IST

ಮಂಗಳೂರು, ಡಿ.21: ಕಲ್ಪವೃಕ್ಷಕ್ಕೆ ಕೀಟಬಾಧೆಯಿಂದ ಕರಾವಳಿಯ ಕೃಷಿಕರು ತತ್ತರಿಸಿದ್ದಾರೆ. ಸಂಕಷ್ಟಕ್ಕೊಳಗಾದ ರೈತರಿಗೆ ಸರಕಾರ ಸೂಕ್ತ ನೆರವು ನೀಡಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ತೋಟಗಾರಿಕಾ ಇಲಾಖೆ, ದ.ಕ.ಜಿಪಂ, ವಿಜಯ ಕರ್ನಾಟಕ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಗುರುವಾರ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ‘ಕಲ್ಪವೃಕ್ಷಕ್ಕೆ ಕೀಟ-ಕಾಟ’ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ಕೀಟನಾಶಕ್ಕೆ ಪರ್ಯಾಯ ಉಪಾಯಗಳನ್ನು ಕಂಡುಹಿಡಿಯಬೇಕಾಗಿದೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಕೃಷಿ ಮಾಡುವ ರೈತರಿದ್ದಾರೆ. ಅಡಿಕೆ, ಗೇರು ಉತ್ಪಾದನೆ ಹೀಗೆ ಆರ್ಥಿಕ ಲಾಭ ತರುವ ತೋಟಗಾರಿಕಾ ಬೆಳೆಗಳನ್ನು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಈ ಬೆಳೆಗಳಿಗೆ ಕೀಟಬಾಧೆಯಂತಹ ಸಮಸ್ಯೆ ಎದುರಾದಾಗ ಸರಕಾರ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಸಚಿವ ರಮಾನಾಥ ರೈ ನುಡಿದರು.

ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಶೋಧಿಸಿ ಬಳಕೆ ಮಾಡಲು ಆದ್ಯತೆಯನ್ನು ನೀಡುವ ಅಗತ್ಯವಿದೆ. ಕೃಷಿ ತೋಟಗಳ ಅಧ್ಯಯನ ನಡೆಸುವಾಗ ವಿಜ್ಞಾನಿಗಳ ನೆರವೂ ಅಧಿಕಾರಿಗಳಿಗೆ ಸಿಗಬೇಕು. ಕೃಷಿ ತೋಟಗಳಿಗೆ ವಿವಿಧ ರೀತಿಯ ರೋಗಗಳು ಬಂದಾಗ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.

ಈ ಹಿಂದೆ ಅಡಿಕೆ ಬೆಳೆಗಾರರು ತೊಂದರೆ ಅನುಭವಿಸಿದಾಗ ಸರಕಾರ ಮಧ್ಯಪ್ರವೇಶ ಮಾಡಿ ನೆರವು ನೀಡಿದೆ. ಅದೇ ರೀತಿ ಎಲ್ಲರಿಗೂ ಉಪಯುಕ್ತವಾದ ಕಲ್ಪವೃಕ್ಷದ ವೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಗಮನಹರಿಸಬೇಕು ಎಂದ ಸಚಿವ ರೈ ತೆಂಗಿನಿಂದ ಬೇರೆ ಬೇರೆ ಉತ್ಪನ್ನಗಳನ್ನು ಮಾಡಿ ಮಾರುಕಟ್ಟೆಗೆ ಪೂರೈಸಿದಲ್ಲಿ ಇನ್ನಷ್ಟು ಲಾಭ ಪಡೆಯಲು ಸಾಧ್ಯವಿದೆ. ಈಗಾಗಲೇ ರಾಜ್ಯ ಸರಕಾರ ನೀರಾ ನೀತಿಯನ್ನು ಜಾರಿಗೆ ತಂದಿದೆ. ಇದರಿಂದಾಗಿ ನೀರಾ ವೌಲ್ಯವರ್ಧಿತ ಉತ್ಪನ್ನವನ್ನು ಮಾರುಕಟ್ಟೆಗೆ ತರಲು ಸಾಧ್ಯವಾಗಿದೆ. ಈ ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸಂಸ್ಕರಣಾ ಘಟಕಗಳನ್ನು ತೆರೆಯುವ ಅಗತ್ಯವಿದೆ ಎಂದರು.

ಮೀನುಗಾರಿಕಾ ಕಾಲೇಜಿನ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಂ.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಿಪಿಸಿಆರ್‌ಐ ಪ್ರಧಾನ ವಿಜ್ಞಾನಿ ಡಾ. ವಿನಾಯಕ ಹೆಗಡೆ, ಎಸ್‌ಸಿಡಿಸಿಸಿ ಬ್ಯಾಂಕ್ ಸಿಇಒ ಸತೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಬೆಂಗಳೂರು ಎನ್‌ಬಿಎಐಆರ್ ಮುಖ್ಯ ವಿಜ್ಞಾನಿ ಡಾ. ಶೈಲೇಶ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ.ಎಚ್.ಆರ್.ನಾಯ್ಕ, ಉಡುಪಿ ಜಿಲ್ಲಾ ಉಪ ನಿರ್ದೇಶಕಿ ಭುವನೇಶ್ವರಿ, ವಿಜಯ ಕರ್ನಾಟಕ ರೆಸ್ಪಾನ್ಸ್ ವಿಭಾಗ ಮುಖ್ಯಸ್ಥ ರಾಮಕೃಷ್ಣ, ಪ್ರಸರಣ ವಿಭಾಗದ ಮುಖ್ಯಸ್ಥ ಕದ್ರಿ ನವನೀತ ಶೆಟ್ಟಿ ಉಪಸ್ಥಿತರಿದ್ದರು.

ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ್ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಶಿವಕುಮಾರ್ ಮಗದ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News