×
Ad

ಬೀಡಿ ಕಾರ್ಮಿಕರ ಸರ್ವೇ: ಅವಧಿ ವಿಸ್ತರಣೆಗೆ ಸಿಐಟಿಯು ಒತ್ತಾಯ

Update: 2017-12-21 20:18 IST

ಕುಂದಾಪುರ, ಡಿ.21: ಕೆಂದ್ರದ ಕಾರ್ಮಿಕ ಸಚಿವಾಲಯದಡಿ ಬರುವ ಕಾರ್ಮಿಕರ ಕಲ್ಯಾಣ ಸಂಘಟನೆ ಹಾಗೂ ಬೀಡಿ ಕಾರ್ಮಿಕರ ಕ್ಷೇಮಾಬಿವೃದ್ದಿ ನಿಧಿ ಸಂಘಟನೆಯ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಬೀಡಿ ಕಾರ್ಮಿಕರ ಸರ್ವೇ ಕಾರ್ಯ ಅಪೂರ್ಣಗೊಂಡಿದೆ. ಹೀಗಾಗಿ ಇದರ ಅಂತಿಮ ದಿನಾಂಕವನ್ನು 2018ರ ಮಾ.31ರವರೆಗೆ ವಿಸ್ತರಿಸುವಂತೆ ಹಾಗು ಈ ಸರ್ವೇ ಕಾರ್ಯದ ಕುರಿತು ವ್ಯಾಪಕ ಪ್ರಚಾರ ನಡೆಸಲು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೇಡರೇಶನ್ (ಸಿಐಟಿಯು) ರಾಜ್ಯ ಸಮಿತಿ, ಕರ್ನಾಟಕ ಕೇರಳ ಕಲ್ಯಾಣ ಅಯುಕ್ತ ಕೆ.ಶೇಖರ್ ಅವರನ್ನು ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೇಡರೇಶನ್‌ನ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಕಲ್ಯಾಣ ಅಯುಕ್ತ ಕೆ.ಶೇಖರ್ ಅವರನ್ನು ಭೇಟಿಯಾಗಿ ಬೀಡಿ ಕಾರ್ಮಿಕರ ಸರ್ವೇ ಕಾರ್ಯದಲ್ಲಿನ ಕೊರತೆಗಳ ಬಗ್ಗೆ ಗಮನ ಸೆಳೆದರು. ರಾಜ್ಯದ 23 ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಸರಿ ಸುಮಾರು 9ರಿಂದ 10 ಲಕ್ಷ ಬೀಡಿ ಕಾರ್ಮಿಕರಿಗೆ ಈ ಸರ್ವೆಯ ಕುರಿತು ಯಾವುದೇ ಮಾಹಿತಿ ಇಲ್ಲವಾಗಿದೆ. ಹೀಗಾಗಿ ಸರ್ವೆಯ ಅಂತಿಮ ದಿನವನ್ನು ವಿಸ್ತರಿಸುವಂತೆ ಒತ್ತಾಯಿಸಲಾಗಿದೆ. ಅಲ್ಲದೇ ಸರ್ವೆಗೆ ಬೀಡಿ ಕಾರ್ಮಿಕ ಸಂಘಗಳು ಸಂಪೂರ್ಣ ಸಹಕಾರ ನೀಡಲಿವೆ ಎಂದು ಭರವೆ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.

ಬೀಡಿ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ಪ್ರಕ್ರಿಯೆ ಸಂಪೂರ್ಣವಾಗಿ ಅನ್‌ಲೈನ್ ಅಗಿರುವ ಕಾರಣ ವಿದ್ಯಾರ್ಥಿವೇತನ ಮಂಜೂ ರಾದ ವಿದ್ಯಾರ್ಥಿಗಳಿಗೆ ಸಂದೇಶವೇ ತಲುಪದೆ ಸಮಸ್ಯಗಳಾಗಿವೆ. ಹೀಗಾಗಿ ವಿದ್ಯಾರ್ಥಿವೇತನ ಮಂಜೂರಾದ ಪಟ್ಟಿಯನ್ನು ಶಾಲಾ-ಕಾಲೇಜುಗಳಿಗೆ ನೀಡುವಂತೆ ಹಾಗು ಅದನ್ನು ಕಡ್ಡಾಯವಾಗಿ ಶಾಲಾ- ಕಾಲೇಜುಗಳಲ್ಲಿ ಸೂಚನ ಫಲಕದಲ್ಲಿ ಪ್ರಕಟಿಸುವಂತೆ ಸಹ ಒತ್ತಾಯಿಸಲಾಯಿತು.

ರಾಜ್ಯದ ಕೆಲವೆಡೆ ಬೀಡಿ ಕಾರ್ಮಿಕರ ಚಿಕಿತ್ಸಾಲಯಗಳಲ್ಲಿ ದೀರ್ಘ ಕಾಲೀನ ಆರೋಗ್ಯ ಸಮಸ್ಯೆಗಳಾದ ರಕ್ತದೊತ್ತಡ, ಡಯಾಬಿಟಿಸ್, ಹೃದಯ ಸಂಬಂದಿ ಕಾಯಿಲೆಗಳಿಗೆ ಔಷಧಿ ಲಭ್ಯವಾಗುತ್ತಿಲ್ಲ ಎಂಬ ದೂರನ್ನು ಆಯುಕ್ತರ ಗಮನಕ್ಕೆ ತರಲಾಯಿತು.

ಸಮಸ್ಯೆಗಳನ್ನು ಅಲಿಸಿದ ಕಲ್ಯಾಣ ಆಯುಕ್ತ ಶೇಖರ್, ಸರ್ವೇ ಕಾರ್ಯದ ಅವಧಿ ವಿಸ್ತರಣೆಗೆ ಕೇಂದ್ರ ಸರಕಾರಕ್ಕೆ ಬರೆಯುವುದಾಗಿ ಹಾಗೂ ವಿದ್ಯಾರ್ಥಿ ವೇತನ ಮಂಜೂರಾದ ಕುರಿತ ವಿದ್ಯಾರ್ಥಿಗಳಿಗೆ ಮಾಹಿತಿ ತಲುಪಿಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು ಎಂದು ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News