ವಿಮಾನನಿಲ್ದಾಣಗಳ ಬಳಿ ಡ್ರೋನ್ ಹಾರಾಟ ಪ್ರಕರಣದಲ್ಲಿ ಹೆಚ್ಚಳ

Update: 2017-12-21 16:31 GMT

ಹೊಸದಿಲ್ಲಿ, ಡಿ.21: ವಿಮಾನಗಳ ಹಾರಾಟಕ್ಕೆ ತೊಂದರೆಯಾಗುವ ರೀತಿಯಲ್ಲಿ ವಿಮಾನ ನಿಲ್ದಾಣಗಳ ಬಳಿ ಡ್ರೋನ್ ಹಾರಾಟ ಪ್ರಕರಣ 2016ರಿಂದ ಹೆಚ್ಚುತ್ತಿದ್ದು ಈ ವರ್ಷ 18 ಪ್ರಕರಣಗಳು ವರದಿಯಾಗಿವೆ ಎಂದು ಸರಕಾರ ಲೋಕಸಭೆಗೆ ಮಾಹಿತಿ ನೀಡಿದೆ.

 ಸರಕಾರೇತರ ಸಂಸ್ಥೆಗಳು, ಸಂಘಟನೆಗಳು ಅಥವಾ ವೈಯಕ್ತಿಕವಾಗಿ ಡ್ರೋನ್ ಅಥವಾ ಮಾನವರಹಿತ ವಿಮಾನ ವ್ಯವಸ್ಥೆಯ ಹಾರಾಟವನ್ನು ನಾಗರಿಕ ಬಳಕೆಗಾಗಿ ನಡೆಸುವುದನ್ನು ನಾಗರಿಕ ವಿಮಾನಯಾನ ಇಲಾಖೆಯ ಮಹಾನಿರ್ದೇಶಕರು ನಿಷೇಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಮಾನನಿಲ್ದಾಣಗಳ ಬಳಿ , ವಿಮಾನಗಳಿಗೆ ಅಪಾಯಕಾರಿ ರೀತಿಯಲ್ಲಿ ಪತ್ತೆಯಾಗುವ ಡ್ರೋನ್‌ಗಳ ಸಂಖ್ಯೆ ಹೆಚ್ಚಿದೆ ಎಂದು ನಾಗರಿಕ ವಿಮಾನಯಾನ ಇಲಾಖೆಯ ಸಹಾಯಕ ಸಚಿವ ಜಯಂತ್ ಸಿನ್ಹ ಲೋಕಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

  2016ರಲ್ಲಿ ಕೇವಲ 9 ಘಟನೆ ನಡೆದಿದ್ದರೆ, 2017ರ ಡಿಸೆಂಬರ್ 15ರವರೆಗೆ 18 ಘಟನೆ ವರದಿಯಾಗಿದೆ . 2014ರಲ್ಲಿ ಇಂತಹ 2 ಪ್ರಕರಣ ಮಾತ್ರ ವರದಿಯಾಗಿದೆ ಎಂದು ಸಚಿವ ಜಯಂತ್ ಸಿನ್ಹ ತಿಳಿಸಿದ್ದು, ಡ್ರೋನ್ ಹಾರಾಟವನ್ನು ನಿಯಂತ್ರಿಸುವ ಕುರಿತು ಯಾವುದೇ ಅಂತರಾಷ್ಟ್ರೀಯ ಮಾನದಂಡ ಇಲ್ಲ ಎಂದು ಹೇಳಿದ್ದಾರೆ.

  ರಿಮೋಟ್ ಮೂಲಕ ಕಾರ್ಯಾಚರಿಸುವ ವಿಮಾನ ವ್ಯವಸ್ಥೆಯ ನಿಯಂತ್ರಣದ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಈಗಾಗಲೇ ಕರಡು ನಿಯಮಾವಳಿಯನ್ನು ರೂಪಿಸಿದ್ದು, ಡ್ರೋನ್ ಹಾರಾಟಕ್ಕೆ ಪರವಾನಿಗೆ ಪತ್ರ ನೀಡುವ ಕುರಿತು ಯಾವುದೇ ಪ್ರಸ್ತಾವನೆಯಿಲ್ಲ. ಆದರೆ ಕರಡು ನಿಯಮಾವಳಿಯಲ್ಲಿ ಕೆಲವು ನಿರ್ಧಿಷ್ಟ ಪ್ರಮಾಣದ ತೂಕದ ಡ್ರೋನ್‌ಗಳಿಗೆ ‘ಮಾನವರಹಿತ ವಿಮಾನ ನಿರ್ವಹಣೆ ಪರವಾನಿಗೆ’ ನೀಡಲು ಅವಕಾಶ ಇದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News