×
Ad

ಬಾಲಪರಾಧ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಪ್ರಯತ್ನ ನಡೆಯಬೇಕಾಗಿದೆ: ನ್ಯಾ.ಮಲ್ಲನ ಗೌಡ

Update: 2017-12-21 23:13 IST

ಮಂಗಳೂರು, ಡಿ. 21: ಸಮಾಜದಲ್ಲಿ ಬಾಲಾಪರಾಧಿಗಳು ಆಗುವುದನ್ನು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಸಮಾಜ ಮುಖಿ ಕೆಲಸ ಮಕ್ಕಳ ಆರೈಕೆ ಕೇಂದ್ರ ಹಾಗೂ ಸಮಾಜದ ಎಲ್ಲಾ ವಿಭಾಗಗಳಿಂದಲೂ ವಿಶೇಷ ಪ್ರಯತ್ನ ನಡೆಯಬೇಕಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯಾಧೀಶ ಮಲ್ಲನ ಗೌಡ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ, ಹಿಂದೆ ನಮ್ಮ ಬಾಲ್ಯದ ದಿನಗಳಲ್ಲಿ ನಮಗೆ ಮತ್ತು ನಮ್ಮ ಪೋಷಕರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಅರಿವಿರಲಿಲ್ಲ ಆದರೂ ಸಮಾಜದಲ್ಲಿ ಬಾಲಾಪರಾಧ ಮಕ್ಕಳ ಮೇಲಿನ ದೌರ್ಜನ್ಯ ಘಟನೆಗಳು ತುಂಬಾ ವಿರಳ. ಮಂಗಳವಾರ ವಿಜಯಪುರದಲ್ಲಿ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳಲ್ಲಿ ಹೆಚ್ಚಿನವರು ಬಾಲಾಪರಾಧಿಗಳು ಆಗಿರುವುದು ಆತಂಕದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಕರ್ತವ್ಯ ನಿರ್ವಹಿಸುತ್ತಿರುವ ಸಂಘಟನೆಗಳು ಒಂದೆಡೆ ಸೇರಿ ಚರ್ಚಿಸುತ್ತಿರುವುದು ಉತ್ತಮ. ಮಕ್ಕಳ ಹಕ್ಕುಗಳ ಬಗ್ಗೆ, ಲೋಪ ದೋಷಗಳ ಸಮಾಜ ಮುಖಿ ಚಿಂತನೆ ನಡೆಯಲಿ ಎಂದು ಮಲ್ಲನ ಗೌಡ ತಿಳಿಸಿದರು.

ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಉಸ್ಮಾನ್ ಮಾತನಾಡುತ್ತಾ, ಬೆಂಗಳೂರು ಹೊರತು ಪಡಿಸಿದರೆ ಮಂಗಳೂರು ಅತ್ಯಂತ ಹೆಚ್ಚು ಮಕ್ಕಳ ಸಂರಕ್ಷಣಾ ಕೇಂದ್ರವನ್ನು ಹೊಂದಿರುವ ಕೇಂದ್ರವಾಗಿದೆ. ಮಕ್ಕಳ ಸಂರಕ್ಷಣಾ ಕೇಂದ್ರಗಳಿಗೆ ಅಕ್ಕಿ ಮತ್ತು ಗೋದಿಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಕೆಲವು ಸಂಸ್ಥೆಗಳ ಸಹಕಾರದೊಂದಿಗೆ ಒಂದು ಕೋಟಿ ರೂ ಮೌಲ್ಯದ ಮೂಲಭೂತ ಸೌಕರ್ಯಗಳನ್ನು ಈ ಕೇಂದ್ರಗಳಿಗೆ ಒದಗಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದರು.

ದ.ಕ. ಜಿಲ್ಲಾ ಮಕ್ಕಳ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರೆನ್ನಿ ಡಿ ಸೋಜ ಮಾತನಾಡುತ್ತಾ, ಒಂದು ಉತ್ತಮ ಕೌಟುಂಬಿಕ ವಾತವರಣದಲ್ಲಿ ಮಕ್ಕಳು ಹೇಗೆ ಬೆಳೆಯುತ್ತಾರೊ ಆ ಎಲ್ಲಾ ಅಂಶಗಳನ್ನು ಪರಿಗಣಿಸಿ ಆ ರೀತಿಯ ವಾತರವರಣವನ್ನು ಮಕ್ಕಳ ಸಂರಕ್ಷಣಾ ಕೇಂದ್ರದಲ್ಲಿ ಕಲ್ಪಿಸಿ ಕೊಡುವ ಬಗ್ಗೆ ಚಿಂತಿಸಬೇಕಾಗಿದೆ ಎಂದು ತಿಳಿಸಿದರು.

2015ರ ಮಕ್ಕಳ ಹಕ್ಕು ಕಾಯಿದೆಯ ಪ್ರಕಾರ ಮಕ್ಕಳ ಸಂರಕ್ಷಣಾ ಕೇಂದ್ರಗಳು ಮಕ್ಕಳ ಹಕ್ಕುಗಳ ಸಂರಕ್ಷಣೆಯನ್ನು ಮಾಡುವ ಕನಿಷ್ಠ ಅರ್ಹತೆಯನ್ನು ಕಡ್ಡಾಯವಾಗಿ ಹೊಂದಿರಲೇ ಬೇಕು ಎಂದು ಸೂಚಿಸುತ್ತದೆ. ಸಂವಿಧಾನದಲ್ಲಿ ನಾಗರಿಕರಿಗೆ ಕೊಡಮಾಡಿರುವ ಹಕ್ಕುಗಳನ್ನು ಪಡೆಯಲು ಮಕ್ಕಳು ಅರ್ಹರು ಅವರಿಗೆ ಸೂಕ್ತ ಆಶ್ರಯ,ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕನ್ನು ಅವರು ಹೊಂದಿರುತ್ತಾರೆ ಈ ನಿಟ್ಟಿನಲ್ಲಿ ಮಕ್ಕಳ ಸಂರಕ್ಷಣಾ ಕೇಂದ್ರಗಳು ಮಕ್ಕಳ ಹಕ್ಕುಗಳ ಉಲ್ಲಂಗನೆಯಾಗದಂತೆ ಎಚ್ಚರ ವಹಿಸಬೇಕಾಗಿದೆ ಎಂದು ರೆನ್ನಿ ಡಿ ಸೋಜ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಶುಭಹಾರೈಸಿದರು.ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್ ಮೊದಲಾದವರು ಉಪಸ್ಥಿತರಿದ್ದರು.ಡೆನ್ನಿಸ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು. ಸುಲೈಮಾನ್ ಖಂಡಿಗ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News