×
Ad

ಸಂತ್ರಸ್ತರಿಗೆ ನ್ಯಾಯಬದ್ಧ ಪರಿಹಾರಕ್ಕೆ ಆದ್ಯತೆ: ಡಾ. ಸಸಿಕಾಂತ್ ಸೆಂಥಿಲ್

Update: 2017-12-22 19:21 IST

ಮಂಗಳೂರು, ಡಿ. 22: ಕೊಚ್ಚಿ-ಕುಟ್ಟನಾಡ್-ಮಂಗಳೂರು ಗೇಲ್ ಗ್ಯಾಸ್ ಪೈಪ್‌ಲೈನ್‌ಗಾಗಿ ಭೂಮಿ ಕಳೆದುಕೊಳ್ಳುವವರಿಗೆ ಭೂಮಿಯ ಪ್ರಸ್ತುತ ಮೌಲ್ಯದಷ್ಟೇ ಪರಿಹಾರ ಒದಗಿಸಿಕೊಡಲು ದ.ಕ. ಜಿಲ್ಲಾಡಳಿತ ವಿಶೇಷ ಆದ್ಯತೆ ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಭರವಸೆ ನೀಡಿದ್ದಾರೆ.

ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ನವರತ್ನ ಕಂಪನಿಯಾದ ಗೇಲ್ (ಇಂಡಿಯಾ) ಲಿ. ವತಿಯಿಂದ ಕೊಚ್ಚಿಯಿಂದ ಮಂಗಳೂರುವರೆಗೆ ಗೇಲ್ ಗ್ಯಾಸ್ ಪೈಪ್‌ಲೇನ್ ಸಂಬಂಧ ಮಂಗಳೂರು ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾದ ಭೂಮಾಲಕರ ಸಭೆಯಲ್ಲಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯಲ್ಲಿ 35 ಕಿ.ಮೀ.ನಷ್ಟು ವ್ಯಾಪ್ತಿಯಲ್ಲಿ ಹಾದುಹೋಗಲಿದೆ. ಮಂಗಳೂರು ತಾಲೂಕಿನ ಮಳವೂರು, ಅದ್ಯಪಾಡಿ, ಕಂದಾವರ, ಮುಳೂರು, ಅಡ್ಡೂರು, ಮಲ್ಲೂರು, ಅರ್ಕುಳ, ಪಾವೂರು, ಕೆಂಜಾರು, ತೋಕೂರು ಮತ್ತು ಬಂಟ್ವಾಳ ತಾಲೂಕಿನ ಮೇರಮಜಲು, ಅಮ್ಮುಂಜೆ, ಪಜೀರು, ಕೈರಂಗಳ, ಬಾಳೆಪುಣಿ, ಕುರ್ನಾಡು ಗ್ರಾಮಗಳ ಮೂಲಕ ಗ್ಯಾಸ್ ಪೈಪ್‌ಲೈನ್ ಹಾದುಹೋಗಲಿದೆ.

ಪ್ರಸ್ತುತ ಸರಕಾರಿ ನಿಯಮದಂತೆ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ಮೊತ್ತವನ್ನು ಗಮನಿಸಿದಾಗ ಅತ್ಯಂತ ಕಡಿಮೆ ಇರುವುದು ಗಮನಕ್ಕೆ ಬಂದಿದೆ. ಕಾನೂನು ಮೀರುವ ಅಧಿಕಾರ ತನಗಿಲ್ಲವಾದರೂ, ಪರಿಹಾರ ಮೊತ್ತವನ್ನು ಆ ಭೂಮಿಯ ನಿಜವಾದ ವೌಲ್ಯಕ್ಕೆ ಸರಿ ಹೊಂದುವ ರೀತಿಯಲ್ಲಿ ಒದಗಿಸಿಕೊಡಲು ಗೈಲ್ ಗ್ಯಾಸ್‌ಲೈನ್‌ನ ಕಂಪೆನಿ ಹಾಗೂ ಸರಕಾರದ ಜತೆಗೆ ವಿಶೇಷ ನೆಲೆಯಲ್ಲಿ ಮಾತುಕತೆ ನಡೆಸಿ ಸೂಕ್ತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಭೂಮಿ ಕಳೆದುಕೊಳ್ಳುವ ರೈತರಿಗೆ ಯಾವುದೇ ಅನ್ಯಾಯ, ತೊಂದರೆ ಆಗದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಜಿ್ಲಾಡಳಿತದ್ದು ಎಂದವರು ಹೇಳಿದರು.

ನಿಯಮ ಪ್ರಕಾರ ಜಮೀನಿನ ಸರಕಾರಿ ಮಾರುಕಟ್ಟೆ ದರದ ಶೇ.10 ಭಾಗ ಸಂತ್ರಸ್ತರಿಗೆ ಪಾವತಿಸಬೇಕಾಗಿದೆ. ಆದರೆ ಸರಕಾರಿ ಮಾರುಕಟ್ಟೆ ದರ ನೈಜ ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಇರುವುದು ತನ್ನ ಗಮನದಲ್ಲಿದೆ. ಆದ್ದರಿಂದ ಸರಕಾರಿ ಮಾರುಕಟ್ಟೆ ದರದ 10 ಪಟ್ಟು ಅಧಿಕ ದರವನ್ನು ಜಮೀನು ದರವೆಂದು ಪರಿಗಣಿಸಿ ಅದರ ಶೇ.10 ಭಾಗ ಪರಿಹಾರ ಒದಗಿಸಲು ಯತ್ನಿಸಲಾಗುವುದು ಎಂದವರು ಸಭೆಯಲ್ಲಿ ವಿವರಿಸಿದರು.

ಕೇರಳದ ಕೊಚ್ಚಿನ್‌ನಿಂದ ಮಂಗಳೂರುವರೆಗೆ ಒಟ್ಟು 435 ಕಿ.ಮೀ. ಉದ್ದದ ಗೇಲ್ ಕಂಪನಿಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಸಂತ್ರಸ್ತರಾಗುವ ಎಲ್ಲ ಕುಟುಂಬಗಳ ಸಮಸ್ಯೆಯನ್ನು ವೈಯುಕ್ತಿಕವಾಗಿ ಚರ್ಚಿಸಲಾಗುವುದು. ಪೈಪ್ ಅಳವಡಿಸುವ ಮಾರ್ಗದಲ್ಲಿ ಯಾವುದೇ ಕಟ್ಟಡಗಳನ್ನು ಒಡೆಯಲಾಗುವುದಿಲ್ಲ. ನಾಶಗೊಳ್ಳುವ ಭತ್ತ ಹಾಗೂ ಇತರ ಕೃಷಿಗೆ ನಿರ್ದಿಷ್ಟ ಪರಿಹಾರ ಒದಗಿಸುವ ಕುರಿತು ಕೂಡ ಗೈಲ್ ಸಂಸ್ಥೆಯ ಜತೆ ಮಾತುಕತೆ ನಡೆದಿದೆ ಎಂದವರು ತಿಳಿಸಿದರು.

ಸಿಆರ್‌ಝಡ್ ವ್ಯಾಪ್ತಿಯ ನದಿ ಬದಿಯಲ್ಲಿ ಪೈಪ್ ಅಳವಡಿಸುವಂತೆ ಕೆಲ ಕೃಷಿಕರು ಮಾಡಿದ ಮನವಿಯನ್ನು ಇಂದಿನ ಪರಿಸ್ಥಿತಿಯಲ್ಲಿ ಪರಿಗಣಿಸುವುದು ಅಸಾಧ್ಯ. ಸುನಾಮಿ, ಚಂಡಮಾರುತದಂತಹ ನೈಸರ್ಗಿಕ ವಿಕೋಪದ ಅಪಾಯ ಸಾಧ್ಯತೆ ಇರುವ ಸಮುದ್ರ ಅಥವಾ ನದಿ ತೀರದಲ್ಲಿ ಯಾವುದೇ ಹೆಚ್ಚುವರಿ ಅಭಿವೃದ್ದಿ ಚಟುವಟಿಕೆ ವಿಸ್ತರಣೆ ಅಾಧ್ಯ ಎಂದವರು ಸ್ಪಷ್ಟಪಡಿಸಿದರು.

ಹೋರಾಟಗಾರ ಸಂತೋಷ್ ಕುಮಾರ್ ರೈ ಬೋಳ್ಯಾರ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಗೇಲ್ ಗ್ಯಾಸ್ ಪೈಪ್‌ಲೈನ್‌ನ ಗುಮ್ಮದಿಂದಾಗಿ ಈ ಭಾಗದ ಜನರು ಮಾನಸಿಕವಾಗಿ ಕುಗ್ಗಿದ್ದಾರೆ. ಪೈಪ್‌ಲೈನ್‌ಗಾಗಿ 824ರಷ್ಟು ಕುಟುಂಬಗಳು ಇದೀಗ ಸೂಕ್ತ ಪರಿಹಾರದ ಭರವಸೆಯೂ ಇಲ್ಲದೆ ತಮ್ಮ ಭೂಮಿ, ಮನೆ, ಅಡಿಕೆ ಗಿಡ ಎಲ್ಲವನ್ನೂ ಕಳೆದುಕೊಳ್ಳಬೇಕಾಗಿದೆ. ಹೀಗಾಗಿ ರೈತರ ನೈಜವಾದ ಸಮಸ್ಯೆಗಳನ್ನು ಅತ್ಯಂತ ಹತ್ತಿರದಿಂದ ಪರಿಗಣಿಸಿ, ಈಗಿನ ಮಾರುಕಟ್ಟೆಯ ದರಕ್ಕಿಂತ ಅಧಿಕ ವೌಲ್ಯದ ಪರಿಹಾರವನ್ನು ಒದಗಿಸಿಕೊಡಬೇಕು. ಇಲ್ಲವಾದರೆ, ಪಕ್ಷ, ಧರ್ಮಾತೀತವಾಗಿ ನಮ್ಮ ಯಾವುದೇ ಜಾಗನ್ನು ಬಿಟ್ಟುಕೊಡುವುದಿಲ್ಲ ಎಂದರು.

‘ಕೃಷಿ ಹಾಗೂ ಜನವಸತಿ ಪ್ರದೇಶವನ್ನು ಬಿಟ್ಟುಕೊಡಲ್ಲ’

ಸಭೆಯಲ್ಲಿ ಪಾಲ್ಗೊಂಡ ರೈತರು ಮಾತನಾಡಿ, ‘ಜನವಸತಿ ಹಾಗೂ ಕೃಷಿ ಜಮೀನಿನಲ್ಲಿ ಗ್ಯಾಸ್ ಪೈಪ್‌ಲೈನ್ ತೆಗೆದುಕೊಂಡು ಹೋಗಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದಕ್ಕಾಗಿ ನಾವು ಯಾವುದೇ ಹೋರಾಟಕ್ಕೆ ಸಿದ್ದವಾಗಿದ್ದೇವೆ’ ಎಂದರು. ಇನ್ನೊಬ್ಬ ರೈತರು ಮಾತನಾಡಿ, ‘ಜಾಗವೇ ಬಿಟ್ಟುಕೊಡುವುದಿಲ್ಲ ಎಂದು ನಿರ್ಧರಿಸಿದ ಮೇಲೆ ಪರಿಹಾರದ ಪ್ರಶ್ನೆ ಉದ್ಭವಿಸುವುದಿಲ್ಲ. ಜಾಗ ಕೊಡುವುದಿಲ್ಲ ಎಂಬುದು ನಮ್ಮ ನಿಲುವು’ ಎಂದು ಹೇಳಿದರು.

ವಕೀಲರೊಬ್ಬರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ನೀಡಿದಷ್ಟೇ ಪ್ರಮಾಣದಲ್ಲಿ ಸೂಕ್ತ ಪರಿಹಾರವನ್ನು ಪೈಪ್‌ಲೈನ್ ಜಾಗ ಕಳೆದುಕೊಳ್ಳುವವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಅಪರ ಜಿಲ್ಲಾಧಿಕಾರಿ ಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಎಲ್ಲರಿಗೂ ಒಂದೇ ನ್ಯಾಯ

ಗೇಲ್ ಪೈಪ್‌ಲೈನ್ ಹಾದುಹೋಗುವ ಮಾರ್ಗದಲ್ಲಿ ರೈತರು ಬದಲಾವಣೆ ಮಾಡುವಂತೆ ಕೆಲವರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಇದರಂತೆ, ಜೀರು ಗ್ರಾಮದಲ್ಲಿ ಇನ್ಫೋಸಿಸ್ ಕ್ಯಾಂಪಸ್‌ನ ಒಳಗಡೆಯಲ್ಲಿಯೇ ರೀ ಎಲೈನ್‌ಮೆಂಟ್ ಮಾಡಲು ಪ್ರಸ್ತಾವನೆ ಬಂದಿದೆ. ಈ ಬಗ್ಗೆ ವಿರೋಧ-ಅಪಸ್ವರ ಬಂದರೂ ಕೂಡ ಅದನ್ನು ಪರಿಗಣಿಸದೆ, ಎಲ್ಲರಿಗೂ ಒಂದೇ ನ್ಯಾಯ ಎಂಬ ನೆಲೆಯಲ್ಲಿ ಅದೇ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಹಾದುಹೋಗಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News