×
Ad

ಫೆರ ಉಲ್ಲಂಘನೆ: ಜನವರಿ 4ರಂದು ಮಲ್ಯ ಪ್ರಕರಣದ ವಿಚಾರಣೆ

Update: 2017-12-22 20:46 IST

ಹೊಸದಿಲ್ಲಿ, ಡಿ.22: ವಿದೇಶ ವ್ಯವಹಾರ ನಿಯಂತ್ರಣ ಕಾಯ್ದೆ (ಫೆರ)ಯನ್ನು ಉಲ್ಲಂಘಿಸಿರುವ ಆರೋಪದಲ್ಲಿ ಪದೇಪದೇ ಸಮನ್ಸ್ ಜಾರಿ ಮಾಡಿದರೂ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯರನ್ನು ಘೋಷಿತ ಅಪರಾಧಿ ಎಂದು ಘೋಷಿಸಬೇಕೆ ಎಂಬ ಬಗ್ಗೆ ನಡೆಯುತ್ತಿರುವ ವಿಚಾರಣೆಯನ್ನು ಜನವರಿ ನಾಲ್ಕರಂದು ಆಲಿಸುವುದಾಗಿ ದಿಲ್ಲಿ ನ್ಯಾಯಾಲಯ ತಿಳಿಸಿದೆ.

ಮಲ್ಯರ ಉಪಸ್ಥಿತಿಯ ಬಗ್ಗೆ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಘೋಷಿತ ಅಪರಾಧಿ ಎಂದು ಘೋಷಿಸುವ ಪ್ರಕ್ರಿಯೆಯನ್ನು ಆರಂಭಿಸಿದ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶರಾದ ದೀಪಕ್ ಶೆಹ್ರಾವತ್ ಗೈರಾಗಿದ್ದ ಕಾರಣ ಶುಕ್ರವಾರದಂದು ಈ ಬಗ್ಗೆ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ.

ನ್ಯಾಯಾಲಯಕ್ಕೆ ಹಾಜರಾಗುವಂತೆ ಮಲ್ಯ ಕಚೇರಿಗೆ ಮತ್ತು ನಿವಾಸಕ್ಕೆ ಹಲವು ಬಾರಿ ಸಮನ್ಸ್‌ಗಳನ್ನು ಕಳುಹಿಸಿದರೂ ಹಾಗೂ ಈ ಬಗ್ಗೆ ಪತ್ರಿಕೆಗಳಲ್ಲಿ ನೊಟೀಸ್‌ಗಳನ್ನು ಪ್ರಕಟಿಸಿದ್ದರೂ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂಬುದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಇಡಿಯ ವಿಶೇಷ ಸಾರ್ವಜನಿಕ ನ್ಯಾಯವಾದಿ ಎನ್ ಕೆ ಮಠ ತಿಳಿಸಿದ್ದಾರೆ.

 ನ್ಯಾಯಾಲಯವು ಮಲ್ಯರಿಗೆ ತನ್ನ ಮುಂದೆ ಹಾಜರಾಗಲು ಕೊನೆಯ ಅವಕಾಶ ನೀಡಿರುವ ಕಾರಣ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ ಜನವರಿ 4ರಂದು ಒತ್ತಾಯ ಮಾಡಬಹುದು ಎಂದು ಹೇಳಲಾಗುತ್ತಿದೆ.

ನ್ಯಾಯಾಲಯವು ಎಪ್ರಿಲ್ 12ರಂದು ಮಲ್ಯಾ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಆದರೆ ಇದಕ್ಕೆ ಮಲ್ಯ ಸರಿಯಾಗಿ ಸ್ಪಂದಿಸದ ಕಾರಣ ನವೆಂಬರ್ 8ರಂದು ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸುವ ಪ್ರಕ್ರಿಯೆಗೆ ನ್ಯಾಯಾಲಯ ಚಾಲನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News