ವಂಚಕರಿಂದ 17,000 ಕೋಟಿ ರೂ. ಕಳೆದುಕೊಂಡ ಬ್ಯಾಂಕ್‌ಗಳು
ಹೊಸದಿಲ್ಲಿ, ಡಿ.22: ಕಳೆದ ವಿತ್ತ ವರ್ಷದಲ್ಲಿ ವಂಚಕರಿಂದಾಗಿ ಬ್ಯಾಂಕ್‌ಗಳು ರೂ. 16,798 ಕೋಟಿಯಷ್ಟು ಬೃಹತ್ ಮೊತ್ತವನ್ನು ಕಳೆದುಕೊಂಡಿರುವುದಾಗಿ ವಿತ್ತ ಸಚಿವರು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಲಿಖಿತ ಉತ್ತರ ನೀಡಿರುವ ವಿತ್ತ ರಾಜ್ಯ ಸಚಿವ ಶಿವ್ ಕೃಪಾಲ್ ಶುಕ್ಲಾ, ನಿಗದಿತ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಆಯ್ದ ಆರ್ಥಿಕ ಸಂಸ್ಥೆಗಳು ಸಲ್ಲಿಸಿರುವ ವಂಚನೆ ನಿಗಾ ವರದಿಯ ಪ್ರಕಾರ 2016-17ರಲ್ಲಿ ರೂ. 16,789 ಕೋಟಿ ವಂಚಕರ ಪಾಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಸೈಬರ್ ಭದ್ರತೆಗಾಗಿ ಪರಿಣತ, ಮಾಹಿತಿ ಭದ್ರತಾ ಆಡಿಟ್, ವಿಧಿವಿಜ್ಞಾನ ಮತ್ತು ಸೈಬರ್ ಭದ್ರತೆ ತಜ್ಞರನ್ನು ಒಳಗೊಂಡ ಅಂತರ್ ಶಿಸ್ತು ಸಮಿತಿಯನ್ನು ಆರ್‌ಬಿಐ ರಚಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಸದ್ಯ ಇರುವ ಅಥವಾ ಅಳವಡಿಸಲಾಗುವ ತಂತ್ರಜ್ಞಾನದಲ್ಲಿ ಇರಬಹುದಾದ ಅಪಾಯಗಳ ಬಗ್ಗೆ ಈ ಸಮಿತಿಯು ಎಚ್ಚರಿಸುವುದರ ಜೊತೆಗೆ ಸೂಕ್ತ ನಿಯಮಗಳನ್ನು ರೂಪಿಸಲು ನೆರವಾಗುತ್ತದೆ. 2016-17ನೇ ಸಾಲಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್ ದರೋಡೆ, ಕಳ್ಳತನ ಹಾಗೂ ಇತರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ಈ ಎಲ್ಲಾ ಘಟನೆಗಳಲ್ಲಿ 65.3 ಕೋಟಿ ರೂ. ಕಳೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ವಿತ್ತ ವರ್ಷದ ಆರಂಭದಲ್ಲಿ ನಡೆದ 393 ಘಟನೆಗಳಲ್ಲಿ 18.48 ಕೋಟಿ ರೂ. ಕಳೆದುಕೊಂಡಿರುವುದಾಗಿ ತಿಳಿಸಿರುವ ಶುಕ್ಲಾ, ತಮ್ಮ ಶಾಖೆಗಳು ಮತ್ತು ಎಟಿಎಂಗಳಲ್ಲಿ ಕಾಲಕಾಲಕ್ಕೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚುಗೊಳಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.