ಸಂಘಪರಿವಾರದ ಲವ್ ಜಿಹಾದ್‌ನಂತಹ ಹಸಿ ಸುಳ್ಳುಗಳನ್ನು ಜನರ ಮುಂದಿಡುತ್ತೇವೆ: ಜಿ.ರಾಜಶೇಖರ್
ಉಡುಪಿ, ಡಿ.22: ಬಿಜೆಪಿ ಹಾಗೂ ಸಂಘಪರಿವಾರ ಮುಸ್ಲಿಮ್ ಸಮುದಾಯವನ್ನು ಅವಮಾನ ಮಾಡುವ ರೀತಿಯಲ್ಲಿ ನಾಡಿನ ಪ್ರಜ್ಞಾವಂತ ಜನರಿಗೆ ಲವ್ ಜಿಹಾದ್‌ನಂತಹ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಿದೆ. ಸಂಘಪರಿವಾರದ ಇಂತಹ ಸುಳ್ಳುಗಳನ್ನು ನಾವು ಚಿಕ್ಕಮಗಳೂರು ಸಮಾವೇಶದಲ್ಲಿ ಬಹಿರಂಗ ಪಡಿಸುತ್ತೇವೆ ಎಂದು ಹಿರಿಯ ಚಿಂತಕ ಹಾಗೂ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಿ. ರಾಜಶೇಖರ್ ಹೇಳಿದ್ದಾರೆ.
ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಕಚೇರಿಯಲ್ಲಿ, ಚಿಕ್ಕಮಗಳೂರಿನಲ್ಲಿ ಡಿ.28 ಮತ್ತು 29ರಂದು ನಡೆಯುವ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ 15ನೆ ವರ್ಷಾಚರಣೆಯ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡುತಿದ್ದರು.
ದೇಶದ ಪ್ರಜಾಪ್ರಭುತ್ವ ಕೇವಲ ಚುನಾವಣೆಯಿಂದ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಪ್ರಜೆಗಳ ಜೀವನ, ಸ್ವಾತಂತ್ರ, ಸ್ವಾಯತ್ತತೆ ಅಪಾಯಕ್ಕೆ ಒಳಗಾಗಿದೆ. ಇಂತಹ ಸನ್ನಿವೇಶದಲ್ಲಿ ವೇದಿಕೆ ಚಿಕ್ಕಮಗಳೂರಿನಲ್ಲಿ ಸಮಾವೇಶ ವನ್ನು ನಡೆಸುತ್ತಿದೆ. ಇದೀಗ ಬಿಜೆಪಿ ಪಕ್ಷ ಮುಂದೆ ನಡೆಯುವ ರಾಜ್ಯ ಚುನಾ ವಣೆಯಲ್ಲಿ ಅಧಿಕಾರಕ್ಕೇರುವ ಗುರಿಯೊಂದಿಗೆ ಈ ಸನ್ನಿವೇಶವನ್ನು ಇನ್ನಷ್ಟು ಭೀಕರಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.
ದಲಿತ ದಮನಿತರ ಹೋರಾಟ ಸಮಿತಿಯ ಸುಂದರ ಮಾಸ್ಟರ್ ಮಾತನಾಡಿ, ನಮಗೆ ಈ ದೇಶದಲ್ಲಿ ಸೌಹಾರ್ದತೆ ಬೇಕೆ ಹೊರತು ಸಮಾಜಕ್ಕೆ ಬೆಂಕಿ ಹಚ್ಚುವ ಸಂಸ್ಕೃತಿ ಅಲ್ಲ. ರಾಷ್ಟ್ರೀಯತೆ, ಧಾರ್ಮಿಕತೆಯ ಹೆಸರಿನಲ್ಲಿ ಭಾವನೆಯನ್ನು ಕೆರಳಿ ಸುವ ಕೆಲಸವನ್ನು ಸಂಘಪರಿವಾರ ಮಾಡುತ್ತಿದೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುವ ಸಂಘಪರಿವಾರದ ಕೆಲಸಕ್ಕೆ ಚಿಕ್ಕಮಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಮೂಲಕ ಸರಿಯಾದ ಚಿಕಿತ್ಸೆ ನೀಡಬೇಕು ಎಂದರು.
ಕರಪತ್ರವನ್ನು ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಗೋಪಾಲ ಬಿ.ಶೆಟ್ಟಿ ಬಿಡುಗಡೆ ಗೊಳಿಸಿದರು. ಚಿಂತಕ ಪ್ರೊ. ಫಣಿರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂ ಪಿಸಿದರು.