“ನಾನು ಪ್ರಕಾಶ್ ರೈ.. ಸಿನಿಮಾದಲ್ಲಿ ಪ್ರಕಾಶ್ ರಾಜ್”
ಮಂಗಳೂರು, ಡಿ.22: ಕೆಲವರು ನನ್ನ ಹೆಸರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ, ನಿಂದಿಸುತ್ತಿದ್ದಾರೆ. ನಾನು ಪ್ರಕಾಶ್ ರೈ, ಸಿನಿಮಾದಲ್ಲಿ ಪ್ರಕಾಶ್ ರಾಜ್. ನಾನು ಕರಾವಳಿಯ ಕೂಸು. ಕನ್ನಡದ ನೆಲದಲ್ಲಿ ಹುಟ್ಟಿದವ ಎಂದು ಪ್ರಸಿದ್ಧ ನಟ, ನಿರ್ದೇಶಕ ಪ್ರಕಾಶ್ ರೈ ಹೇಳಿದರು.
ಮಂಗಳೂರಿನಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ನಿಂದಿಸುವವರಿಗೆ ನಾನು ಅವರ ಭಾಷೆಯಲ್ಲೇ ಉತ್ತರಿಸುತ್ತೇನೆ. ನಟ ಸಾರ್ವಭೌಮ ರಾಜ್ ಕುಮಾರ್ ರ ಹೆಸರು ಮುತ್ತುರಾಜ್, ರಜಿನಿಕಾಂತ್ ಅವರ ಹೆಸರು ಶಿವಾಜಿ ರಾವ್ ಗಾಯಕ್ ವಾಡ್ ಎಂದು. ನನ್ನ ಹೆಸರಿನ ಬಗ್ಗೆ ಪ್ರಶ್ನೆ ಕೇಳುವ ವ್ಯಕ್ತಿ ಅವರ ಹೆಸರು ಏಕೆ ಹಾಗಿವೆ ಎಂದು ಕೇಳಬೇಕಲ್ಲವೇ ಎಂದು ಪ್ರಶ್ನಿಸಿದರು.
ನನ್ನ ತಂದೆ ಇಲ್ಲಿನವರು. ತಾಯಿ ಧಾರವಾಡದವರು. ನಾನು ಕನ್ನಡದ ನೆಲದಲ್ಲಿ ಹುಟ್ಟಿದವ ಎನ್ನುವುದನ್ನು ಮತ್ತೆ ಇಲ್ಲಿಯೇ ನಿಂತು ಹೇಳಬೇಕಾಗಿದೆ. ತಮಿಳರು, ತೆಲುಗರು ಮಲೆಯಾಳಿಗಳು, ಹಿಂದಿ ಭಾಷೆಯ ಜನರು ನನ್ನನ್ನು ಕಲಾವಿದನಾಗಿ ನನ್ನವರು ಎನ್ನುತ್ತಿದ್ದಾರೆ. ಅದೆಲ್ಲಕ್ಕಿಂತಲೂ ನನ್ನ ನೆಲದಲ್ಲಿ ನಾನು ಇಲ್ಲಿಯವ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಪ್ರಕಾಶ್ ರೈ ಹೇಳಿದರು. ತನ್ನನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ ಸಂಸದರೊಬ್ಬರಿಗೆ ಪರೋಕ್ಷವಾಗಿ ನೀಡುತ್ತಿರುವ ಉತ್ತರ ಇದು ಎಂದವರು ಹೇಳಿದರು.