varthabharati.in ಹೆಸರಲ್ಲಿ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಸುಳ್ಳು ಸುದ್ದಿ : ದೂರು ದಾಖಲು

Update: 2017-12-22 17:18 GMT

ಕೆಲವು ಸಮಾಜ ವಿರೋಧಿ ಶಕ್ತಿಗಳು ವಾರ್ತಾ ಭಾರತಿ ಕನ್ನಡ ದೈನಿಕದ varthabharati.in ವೆಬ್‌ಸೈಟ್‌ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ. ಶುಕ್ರವಾರ ಇಂತಹ ಎರಡು ನಿರ್ದಿಷ್ಟ ಪ್ರಕರಣಗಳನ್ನು ಗುರುತಿಸಲಾಗಿದೆ. ಒಂದು ಪ್ರಕರಣದಲ್ಲಿ , ದಕ್ಷಿಣ ಕನ್ನಡದ ಪ್ರಖ್ಯಾತ ಧಾರ್ಮಿಕ ಕೇಂದ್ರವೊಂದಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರ ವಿರುದ್ಧ ಅವಹೇಳನಕಾರಿ ಬರಹವೊಂದನ್ನು varthabharati.in ನಲ್ಲಿ ಪ್ರಕಟವಾದ ಸುದ್ದಿ ಎಂಬಂತೆ ತೋರಿಸಿ ವಾಟ್ಸಾಪ್‌ನಲ್ಲಿ ಹರಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ, ವಿಜಯಪುರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಹಸಿ ಸುಳ್ಳು ಸುದ್ದಿಯೊಂದನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರಲ್ಲಿ ಬರೆದು varthabharati.in ನಲ್ಲಿ ಪ್ರಕಟವಾದ ಸುದ್ದಿ ಎಂಬಂತೆ ಫೇಸ್‌ಬುಕ್‌ನಲ್ಲಿ ಹಾಕಲಾಗಿದೆ.

ಮೊದಲ ಪ್ರಕರಣದ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಹಾಗು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಎರಡನೇ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಈ ದುಷ್ಕೃತ್ಯದ ಹಿಂದಿರುವ ಸಮಾಜ ವಿರೋಧಿ ಶಕ್ತಿಗಳನ್ನು ತಕ್ಷಣ ಕಂಡು ಹಿಡಿದು ಅವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಯನ್ನು ವಿನಂತಿಸಲಾಗಿದೆ.

'ವಾರ್ತಾಭಾರತಿ' ಪತ್ರಿಕೆಯ ಪ್ರಧಾನ ಸಂಪಾದಕರು ಈ ಬೆಳವಣಿಗೆಯ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಇದು ಸಮಾಜದ ಶಾಂತಿ , ಸುವ್ಯವಸ್ಥೆ ಕದಡುವ, ಪರಸ್ಪರ ಅನುಮಾನ, ದ್ವೇಷ ಬೆಳೆಸುವ ಹಾಗು ವಿಶ್ವಾಸಾರ್ಹ ಮಾಧ್ಯಮವೊಂದರ ಹೆಸರಿಗೆ ಕಳಂಕ ತರುವ ದುಷ್ಟ ಪ್ರಯತ್ನವಾಗಿದೆ. ಇಂತಹ ವಿಕೃತ ಮನಸ್ಸುಗಳಿಂದಾಗಿ ಇಂದು ಸಮಾಜದಲ್ಲಿ ಅನಗತ್ಯ ವಿವಾದಗಳು ಸೃಷ್ಟಿಯಾಗುತ್ತಿವೆ ಎಂದವರು ಹೇಳಿದ್ದಾರೆ.

ವದಂತಿಕೋರರ ಹಾವಳಿ ಕುರಿತು ಜನರೂ ಎಚ್ಚರಿಕೆಯಿಂದಿರಬೇಕಾಗಿದೆ. ಸುದ್ದಿಯ ರೂಪದಲ್ಲಿ ದ್ವೇಷ ಹರಡುವ, ಸಂಶಯ ಬಿತ್ತುವ ಸುಳ್ಳುಗಳನ್ನು ಮತ್ತು ಶುದ್ಧ ವದಂತಿಗಳು ಫೇಸ್‌ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮತಾಣಗಳಲ್ಲಿಗಳಲ್ಲಿ ಕಂಡು ಬಂದರೆ ಅದನ್ನು ಕುರುಡಾಗಿ ನಂಬಿ ಇತರರಿಗೆ ಫಾರ್ವರ್ಡ್ ಮಾಡದೆ ಅದರ ಸತ್ಯಾಸತ್ಯತೆಯನ್ನು ಅಧಿಕೃತ ಮೂಲಗಳನ್ನು ಸಂಪರ್ಕಿಸಿ ಖಾತ್ರಿಪಡಿಸಿಕೊಳ್ಳಬೇಕು. ಸುಳ್ಳು ಸುದ್ದಿಯನ್ನು ಹರಡುವವರ ಬಗ್ಗೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಇಂತಹವರಿಗೆ ಕಡಿವಾಣ ಹಾಕಲು ಕೈಜೋಡಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News