ಉತ್ತರ ಕೊರಿಯದ ವಿರುದ್ಧ ಕಠಿಣ ದಿಗ್ಬಂಧನ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಂಗೀಕಾರ

Update: 2017-12-23 14:50 GMT

►ತೈಲ ಆಮದಿನ ಮೇಲಿನ ಮಿತಿಯಲ್ಲಿ ಗಣನೀಯ ಇಳಿಕೆ

►ವಿದೇಶಗಳಲ್ಲಿ ಕೆಲಸ ಮಾಡುವ ಉತ್ತರ ಕೊರಿಯನ್ನರು 24 ತಿಂಗಳಲ್ಲಿ ಸ್ವದೇಶಕ್ಕೆ ವಾಪಸ್

►ಉತ್ತರ ಕೊರಿಯಕ್ಕೆ ಮತ್ತು ಅಲ್ಲಿಂದ ಕದ್ದುಮುಚ್ಚಿ ಸರಕು ಸಾಗಿಸುವ ಹಡಗುಗಳ ವಿರುದ್ಧ ಕಾರ್ಯಾಚರಣೆ

ನ್ಯೂಯಾರ್ಕ್, ಡಿ. 23: ಉತ್ತರ ಕೊರಿಯವು ಇತ್ತೀಚೆಗೆ ಉಡಾಯಿಸಿದ ಪ್ರಕ್ಷೇಪಕ ಕ್ಷಿಪಣಿಗೆ ಪ್ರತಿಯಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆ ದೇಶದ ವಿರುದ್ಧ ಶುಕ್ರವಾರ ಇನ್ನಷ್ಟು ಕಠಿಣ ದಿಗ್ಬಂಧನಗಳನ್ನು ವಿಧಿಸಿದೆ. ಇದಕ್ಕೆ ಸಂಬಂಧಿಸಿದ ನಿರ್ಣಯವನ್ನು ಮಂಡಳಿಯು ಅವಿರೋಧವಾಗಿ ಅಂಗೀಕರಿಸಿದೆ.

ನೂತನ ದಿಗ್ಬಂಧನವು ಉತ್ತರ ಕೊರಿಯದ ತೈಲ ಆಮದಿನ ಮೇಲಿನ ಮಿತಿಯನ್ನು ಗಣನೀಯವಾಗಿ ತಗ್ಗಿಸಿದೆ. ಅದೂ ಅಲ್ಲದೆ, ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಉತ್ತರ ಕೊರಿಯನ್ನರು 24 ತಿಂಗಳಲ್ಲಿ ತಮ್ಮ ದೇಶಕ್ಕೆ ವಾಪಸಾಗಬೇಕಾಗಿದೆ ಹಾಗೂ ಕಲ್ಲಿದ್ದಲು ಮತ್ತು ತೈಲ ಸೇರಿದಂತೆ ನಿಷೇಧಿತ ಸರಕುಗಳನ್ನು ಉತ್ತರ ಕೊರಿಯಕ್ಕೆ ಮತ್ತು ಅಲ್ಲಿಂದ ಹೊರಗೆ ಕಳ್ಳಸಾಗಾಣಿಕೆ ಮಾಡುವ ಹಡಗುಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತದೆ.

 ಉತ್ತರ ಕೊರಿಯದ ಎಲ್ಲ ತೈಲ ಆಮದುಗಳನ್ನು ನಿಷೇಧಿಸಬೇಕು ಹಾಗೂ ಅಲ್ಲಿನ ಸರಕಾರ ಮತ್ತು ಅದರ ನಾಯಕ ಕಿಮ್ ಜಾಂಗ್ ಉನ್ ವಿದೇಶಗಳಲ್ಲಿ ಹೊಂದಿರುವ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕು ಎಂಬ ಕಠಿಣ ನಿರ್ಬಂಧಗಳನ್ನು ಟ್ರಂಪ್ ಆಡಳಿತ ಮುಂದಿಟ್ಟಿತ್ತು. ಆದರೆ, ಅದಕ್ಕೆ ಭದ್ರತಾ ಮಂಡಳಿಯು ಅವಕಾಶ ನೀಡಲಿಲ್ಲ.

  ನಿರ್ಣಯದ ಕರಡನ್ನು ಅಮೆರಿಕ ರಚಿಸಿತು ಹಾಗೂ ಚೀನಾದೊಂದಿಗೆ ಆ ಬಗ್ಗೆ ಚರ್ಚಿಸಲಾಯಿತು. ಆದರೆ, ನಿರ್ಣಯವನ್ನು ಪರಿಶೀಲಿಸಲು ಹಾಗೂ ಕೊನೆಯ ಕ್ಷಣದ ಬದಲಾವಣೆಗಳನ್ನು ಮಾಡಲು ಇತರ 13 ದೇಶಗಳಿಗೆ ಕಡಿಮೆ ಕಾಲಾವಕಾಶ ನೀಡಲಾಗಿದೆ ಎಂಬುದಾಗಿ ರಶ್ಯ ಆಕ್ಷೇಪಿಸಿತು.

ಅಂತಿಮವಾಗಿ ಕರಡು ನಿರ್ಣಯದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಯಿತು. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಉತ್ತರ ಕೊರಿಯನ್ನರು ಸ್ವದೇಶಕ್ಕೆ ಹಿಂದಿರುಗಲು ನೀಡಲಾಗಿದ್ದ 12 ತಿಂಗಳ ಕಾಲಾವಕಾಶವನ್ನು 24 ತಿಂಗಳಿಗೆ ವಿಸ್ತರಿಸಲಾಯಿತು ಹಾಗೂ ವಿಶ್ವಸಂಸ್ಥೆಯ ದಿಗ್ಬಂಧನಗಳ ಕಪ್ಪುಪಟ್ಟಿಗೆ ಸೇರಿಸಲಾದ ಉತ್ತರ ಕೊರಿಯನ್ನರ ಸಂಖ್ಯೆಯನ್ನು 19ರಿಂದ 15ಕ್ಕೆ ಇಳಿಸಲಾಯಿತು.

ಅಂತಾರಾಷ್ಟ್ರೀಯ ಆಕ್ರೋಶದ ಪ್ರತಿಫಲನ: ನಿಕ್ಕಿ ಹೇಲಿ

ಮತದಾನದ ಬಳಿಕ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ, ‘‘ಈ ಅಭೂತಪೂರ್ವ ದಿಗ್ಬಂಧನಗಳನ್ನು ವಿಧಿಸುವಲ್ಲಿ ಭದ್ರತಾ ಮಂಡಳಿಯು ತೋರಿಸಿರುವ ಏಕತೆಯು ಕಿಮ್ ಆಡಳಿತದ ಕೃತ್ಯಗಳ ವಿರುದ್ಧದ ಅಂತಾರಾಷ್ಟ್ರೀಯ ಆಕ್ರೋಶವನ್ನು ಬಿಂಬಿಸುತ್ತದೆ’’ ಎಂದರು.

ನೂತನ ದಿಗ್ಬಂಧನವು ಉತ್ತರ ಕೊರಿಯ ಸರಕಾರಕ್ಕೆ ಸುಮಾರು 250 ಮಿಲಿಯ ಡಾಲರ್ (ಸುಮಾರು 1,600 ಕೋಟಿ ರೂಪಾಯಿ)ನಷ್ಟು ನಷ್ಟ ಉಂಟುಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News