ಸ್ಕೂಟರ್ ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ: ತಾಯಿ, ಮಗಳು ಸ್ಥಳದಲ್ಲೇ ಮೃತ್ಯು
ಪುತ್ತೂರು, ಡಿ. 23: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಆಕ್ವಿವಾ ಸ್ಕೂಟರ್ ಸವಾರೆ ಹಾಗೂ ಸಹಸವಾರೆ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಬೆದ್ರಾಳ ಸಮೀಪದ ರೈಲ್ವೇ ಮೇತ್ಸೇತುವೆ ಬಳಿ ಶನಿವಾರ ಸಂಜೆ ಸಂಭವಿಸಿದೆ.
ತಮಿಳುನಾಡು ಮೂಲದವರಾಗಿದ್ದು, ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಎಂಬಲ್ಲಿ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ನಡೆಸುತ್ತಿದ್ದ ಕಮಲಾ (41) ಮತ್ತು ಅವರ ಪುತ್ರಿ ಶ್ರಜನ್ಯಾ (11) ಮೃತರು ಎಂದು ಗುರುತಿಸಲಾಗಿದೆ.
ಕಮಲಾ ಅವರ ಪುತ್ರಿಯರಾದ ಸೌಜನ್ಯಾ ಮತ್ತು ಶ್ರಜನ್ಯಾ ಮಂಗಳೂರಿನ ವಸತಿ ನಿಲಯವೊಂದರಲ್ಲಿ ಉಳಿದುಕೊಂಡು ಅಲ್ಲೇ ಶಿಕ್ಷಣ ಪಡೆಯುತ್ತಿದ್ದರು. ಕ್ರಿಸ್ಮಸ್ ರಜೆ ಲಭಿಸಿದ ಹಿನ್ನೆಲೆಯಲ್ಲಿ ಕಮಲಾ ಅವರು 6ನೆ ತರಗತಿಯಲ್ಲಿ ಕಲಿಯುತ್ತಿದ್ದ ತನ್ನ ಎರಡನೆ ಪುತಿ ಶ್ರಜನ್ಯಾಳನ್ನು ಶನಿವಾರ ಮಂಗಳೂರಿನಿಂದ ಪುತ್ತೂರಿಗೆ ಬಸ್ ನಲ್ಲಿ ಕರೆದುಕೊಂಡು ಬಂದು ಸಂಜೆ ಪುತ್ತೂರಿನಿಂದ ತನ್ನ ಆಕ್ವಿವಾದಲ್ಲಿ ಕುಳ್ಳಿರಿಸಿಕೊಂಡು ವೀರಮಂಗಲಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಕಮಲಾ ಚಲಾಯಿಸಿಕೊಂಡು ಹೋಗುತ್ತಿದ್ದ ಆಕ್ವಿವಾಗೆ ಹಿಂದಿನಿಂದ ಬಂದ ಶಾಂತಿಗೋಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ವಾಹನವೊಂದನ್ನು ಓವರ್‌ಟೇಕ್ ಮಾಡುವ ಸಂದರ್ಭ ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು, ಬಸ್ಸಿನ ಚಕ್ರ ಕಮಲಾ ಹಾಗೂ ಬಾಲಕಿಯ ತಲೆಯ ಮೇಲೆಯೇ ಹರಿದ ಪರಿಣಾಮ ಅವರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸಂದರ್ಭ ಆರೋಪಿ ಬಸ್ ಚಾಲಕ ಬಸ್ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಘಟನೆಯ ಕುರಿತು ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾ ಕಳೆದ ಒಂದು ವರ್ಷದಿಂದ ವೀರಮಂಗಲದ ರಬ್ಬರ್ ತೋಟದಲ್ಲಿ ಟ್ಯಾಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲೇ ಗುಡಿಸಲೊಂದರಲ್ಲಿ ವಾಸ್ತವ್ಯ ಹೊಂದಿದ್ದರು ಎಂದು ತಿಳಿದು ಬಂದಿದೆ.