ಸಾಲಿಗ್ರಾಮ: ಒಳಗೆ ವಿಶೇಷ ಸಭೆ, ಗದ್ದಲ; ಹೊರಗೆ ಪ್ರತಿಭಟನೆ, ದಿಗ್ಬಂಧನ

Update: 2017-12-23 15:37 GMT

ಸಾಲಿಗ್ರಾಮ, ಡಿ.23: ಇಲ್ಲಿನ ಚಿತ್ರಪಾಡಿ ಮಾರಿಗುಡಿ ಸಮೀಪದಲ್ಲಿ ಜನರ ಪ್ರತಿರೋಧವನ್ನು ಕಡೆಗಣಿಸಿ ಬಾರ್ ಪ್ರಾರಂಭವಾಗಿರುವುದನ್ನು ವಿರೋಧಿಸಿ ಶನಿವಾರ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ವಿವಿಧ ಮಹಿಳಾ ಸಂಘಟನೆ ಗಳ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು, ಸಾಲಿಗ್ರಾಮ ಪೇಟೆ ಪರಿಸರದ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.

ಬಾರ್‌ಗೆ ಅನುಮತಿ ವಿಚಾರವಾಗಿ ವಿಶೇಷ ಸಭೆ ಕರೆದ ಹಿನ್ನಲೆಯಲ್ಲಿ ಪಟ್ಟಣ ಪಂಚಾಯತ್ ಮುಂಭಾಗದಲ್ಲೇ ಪ್ರತಿಭಟನೆ ನಡೆಸಿದ ಸ್ಥಳೀಯರು, ಸಭೆ ಮುಗಿಸಿ ಪಂಚಾಯತ್ ಕಟ್ಟಡದಿಂದ ಹೊರಬರುತ್ತಿದ್ದ ಪಟ್ಟಣ ಪಂಚಾಯತ್ ಸದಸ್ಯರನ್ನು ತಡೆದು ನ್ಯಾಯ ಸಿಗುವವರೆಗೂ ಯಾರನ್ನು ಹೊರಗೆ ಬಿಡುವುದಿಲ್ಲ ಎಂದು ದಿಗ್ಭಂಧನ ವಿಧಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರ ಪರವಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಡಾ.ಪಿ.ಸಿ.ಸುಧಾಕರ್, ಕೃಷ್ಣಮೂರ್ತಿ, ಪ್ರಾಂಶುಪಾಲ ಜಗದೀಶ ನಾವುಡ ಸಭೆಯ ನಿರ್ಣಯದ ಬಳಿಕ ಹೊರ ಬಂದು ಸಭೆಯಲ್ಲಿ ನಡೆದ ಘಟನೆಯ ಕುರಿತು ಮಾಹಿತಿ ನೀಡಿದರು. ಆದರೆ ಬಾರ್ ಈಗಾಗಲೇ ತೆರೆದಿದೆ, ತೆರೆದ ಬಾರ್‌ನ್ನು ಇಂದೇ ಮುಚ್ಚಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿ ಪಟ್ಟಣ ಪಂಚಾಯತ್ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ನಿಂತು ಯಾರು ಹೊರಗೆ ಹೋಗದಂತೆ ತಡೆದು ನ್ಯಾಯ ನೀಡುವ ವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

ಮುಖ್ಯಾಧಿಕಾರಿ ಶ್ರೀಪಾದ್ ಭಟ್, ಅಧ್ಯಕ್ಷೆ ರತ್ನಾ ಗಾಣಿಗ ಇನ್ನುಳಿದ ಕೆಲ ಸದಸ್ಯರು ಪ್ರತಿಭಟನಾನಿರತರಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರೂ ಪ್ರತಿಭಟನಾಕಾರರು ಅದನ್ನು ತಿರಸ್ಕರಿಸಿ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು.

 ಬಳಿಕ ಅಬಕಾರಿ ಎಸ್‌ಐ ಜ್ಯೋತಿ, ಅಬಕಾರಿ ಡಿ.ಸಿ.ಮೇರುನಂದನ್‌ಗೆ ಕರೆ ಮಾಡಿ ಇಲ್ಲಿನ ಪರಿಸ್ಥಿತಿ ವಿವರಿಸಿದರು. ಆಗ ಸ್ಥಳಕ್ಕೆ ಆಗಮಿಸಿದ ಅಬಕಾರಿ ಡಿಸಿ ಪ್ರತಿಭಟನಾ ನಿರತ ಬಳಿ ಮಾತುಕತೆ ನಡೆಸಿದರು. ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಬಾರ್‌ಗಳನ್ನು ಬಂದ್ ಮಾಡಿ ಎಂದು ಒತ್ತಾಯಿಸಿದರು.

ಪ್ರತಿಭಟನಕಾರರು ಬಾರ್ ಬಂದ್ ಆಗಬೇಕೆಂದು ಪ್ರತಿಭಟನೆ ಮುಂದುವರಿಸಿದರು. ಸಂಜೆಯ ವೇಳೆ ಹಿರಿಯ ಅಧಿಕಾರಿಗಳು ಬಾರ್ ವಿಚಾರ ಪರಿಹರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News