ಕೋಟ: ಕೃಷಿ ಸಚಿವರಿಂದ ಶೇಂಗಾ ಬೆಳೆಯಲ್ಲಿ ಕೂರಿಗೆ ವಿಧಾನದ ಬಿತ್ತನೆಗೆ ಚಾಲನೆ
ಕೋಟ, ಡಿ.23: ಕರಾವಳಿಯಲ್ಲಿ ಅತ್ಯಂತ ಲಾಭದಾಯಕ ವಾಣಿಜ್ಯ ಬೆಳೆ ಎನಿಸಿಕೊಂಡಿರುವ ನೆಲಗಡಲೆ (ಶೇಂಗಾ) ಬೆಳೆಯಲ್ಲಿ ಯಾಂತ್ರೀಕೃತವಾದ ಕೂರಿಗೆ ವಿಧಾನದಲ್ಲಿ ಬಿತ್ತನೆಗೆ ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಕೋಟ ಹೋಬಳಿಯ ಮಣೂರು ಗ್ರಾಮದಲ್ಲಿ ಚಾಲನೆ ನೀಡಿದರು.
ಕೃಷ್ಣ ಬೈರೇಗೌಡ ಅವರು ಮಣೂರಿನ ಕೃಷ್ಣ ಹೊಳ್ಳ, ರಾಮ ಹೊಳ್ಳ ಹಾಗೂ ಇತರರ ಗದ್ದೆಯಲ್ಲಿ ಟ್ರಾಕ್ಟರ್‌ಚಾಲಿತ ಕೂರಿಗೆ ಬಿತ್ತನೆ ಹಾಗೂ ಟಿಲ್ಲರ್ ಚಾಲಿತ ಕೂರಿಗೆ ಬಿತ್ತನೆಯ ಪ್ರಾತ್ಯಕ್ಷಿಕೆಯನ್ನು ತಾವೇ ಟ್ರಾಕ್ಟರ್ ಹಾಗೂ ಟಿಲ್ಲರ್‌ಗಳನ್ನು ಗದ್ದೆಯಲ್ಲಿ ಚಲಾಯಿಸುವ ಮೂಲಕ ರೈತಾಪಿ ಜನರಿಗೆ ತೋರಿಸಿದರು.
ವಿವಿಧ ಕಾರಣಗಳಿಂದ ಜನರು ಕೃಷಿಯಿಂದ ವಿಮುಖರಾಗುತ್ತಿರುವಾಗ ಯಾಂತ್ರೀಕರಣವೊಂದೇ ಕೃಷಿ ಉಳಿಯಲು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು. ಶೇಂಗಾ ಕೃಷಿಯಲ್ಲಿ ಕೂರಿಗೆ ಪದ್ಧತಿಯನ್ನು ಅನುಸರಿಸುವು ದರಿಂದ ಶೇ.20ರಿಂದ 30ರಷ್ಟು ಖರ್ಚು ಕಡಿಮೆಯಾಗುವುದಲ್ಲದೇ, ಲಾಭಾಂಶವೂ ಅದೇ ಪ್ರಮಾಣದಲ್ಲಿ ಹೆಚ್ಚಾಗುವುದು. ಈಗ ಎಕರೆಗೆ 4ರಿಂದ 5 ಸಾವಿರ ರೂ.ವೆಚ್ಚವಾದರೆ, ಕೂರಿಗೆ ವಿಧಾನದಿಂದ ಅದು ಕೇವಲ ಒಂದು ಸಾವಿರ ಮಾತ್ರ ಆಗಿರುವುದು ಎಂದರು.
ಉಡುಪಿ ಜಿಲ್ಲೆಯಲ್ಲಿ ಸುಮಾರು 8ಸಾವಿರ ಹೆಕ್ಟೇರ್‌ನಲ್ಲಿ ದ್ವಿದಳಧಾನ್ಯ ಹಾಗೂ ಎಣ್ಣೆಕಾಳು ಬೆಳೆಯನ್ನು ಹಿಂಗಾರಿನಲ್ಲಿ ಬೆಳೆದರೆ, ಸುಮಾರು 2000 ಹೆಕ್ಟೇರ್‌ನಲ್ಲಿ ಶೇಂಗಾ ಬೆಳೆ ಬೆಳೆಯಲಾಗುತ್ತಿದೆ. ಕೂರಿಗೆ ವಿಧಾನದಿಂದ ಗೊಬ್ಬರದಲ್ಲೂ ಉಳಿತಾಯವಾಗುತ್ತದೆ. ಒಟ್ಟಾರೆ ಎಲ್ಲಾ ರೀತಿಯ ರೈತರಿಗೂ ಯಾಂತ್ರೀಕರಣ ಎಂಬುದು ದೇವರು ಕೊಟ್ಟ ವರದಂತೆ ಎಂದರು.
ಉಡುಪಿ ಜಿಲ್ಲೆಯ ಕೋಟ ಹೋಬಳಿ ಹಾಗೂ ಬೈಂದೂರು ಹೋಬಳಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ರೈತರು ನೆಲಗಡಲೆ ಬೆಳೆ ಬೆಳೆಯುತಿದ್ದಾರೆ. ಉಡುಪಿ ತಾಲೂಕಿನಲ್ಲಿ ಒಟ್ಟು 435 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿದೆ. ಇದರಲ್ಲಿ 230 ಹೆಕ್ಟೇರ್ ಪ್ರದೇಶ ಕೋಟ ಹೋಬಳಿಯಲ್ಲಿ ಅದರಲ್ಲೂ ಮಣೂರು ಪರಿಸರದಲ್ಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಂತೋನಿ ತಿಳಿಸಿದರು. ಇಲ್ಲಿ 225 ಕ್ವಿಂಟಾಲ್ ಶೇಂಗಾ ಬೀಜದ ಬಿತ್ತನೆ ನಡೆಯುತ್ತಿದೆ. ಇದಕ್ಕೆ ಹಾಗೂ ಜಿಪ್ಸನ್ ಗೊಬ್ಬರವನ್ನು ಶೇ.50 ಸಬ್ಸಿಡಿಯಲ್ಲಿ ರೈತರಿಗೆ ವಿತರಿಸಲಾಗುತ್ತಿದೆ ಎಂದರು.
ಕೋಣದ ಸಹಾಯದಿಂದ ಉಳುಮೆ ಮಾಡಿ ಮಾಡುವ ಬಿತ್ತನೆಗಿಂತ ಪವರ್ ಟಿಲ್ಲರ್ ಹಾಗೂ ಟ್ರಾಕ್ಟರ್ ಬಳಸಿ ಮಾಡುವ ಬಿತ್ತನೆಯಿಂದ ಭಾರೀ ಉಳಿತಾಯವಾಗುವುದು ಹಾಗೂ ಇದು ಲಾಭದಾಯಕ ಸಹ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಗ್ರಾಪಂ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ರೈತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.