‘ಸೌಹಾರ್ದ ಮಂಟಪ’ ಪೋಸ್ಟರ್ ಬಿಡುಗಡೆ
ಮಂಗಳೂರು, ಡಿ. 23: ಜ. 28 ಮತ್ತು 29ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ 15ನೆ ವರ್ಷಾಚರಣೆಯ ‘ಸೌಹಾರ್ದ ಮಂಟಪ’ ರಾಷ್ಟ್ರೀಯ ಸಮಾವೇಶದ ಪೋಸ್ಟರ್‌ನ್ನು ಶನಿವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ ಬಿಡುಗಡೆಗೊಂಡಿತು.
ಈ ಸಂದರ್ಭದಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು, ಕಾರ್ಯದರ್ಶಿ ಇಸ್ಮತ್ ಪಜೀರು, ಕೇಂದ್ರ ಸಮಿತಿ ಸದಸ್ಯ ಉಮರ್ ಯು.ಎಚ್., ಪಿಯುಸಿಲ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ, ಜಿಲ್ಲಾಧ್ಯಕ್ಷ ಕಬೀರ್ ಉಳ್ಳಾಲ್, ಎಸ್. ಐ. ಓ. ಉಳ್ಳಾಲ ಘಟಕದ ಅಧ್ಯಕ್ಷ ಅಶೀರುದ್ದೀನ್ ಆಲಿಯಾ, ವಿಲ್ಸನ್ ಕಟೀಲು, ಮುಹಮ್ಮದ್ ಮುಹ್ಸಿನ್, ಪ್ರೊ. ಶಶಿಕಾಂತ್, ಪ್ರವೀಣ್ ಶೆಟ್ಟಿ, ಇರ್ಶಾದ್ ವೇಣೂರು, ಗುಲಾಬಿ ಬಿಳಿಮಲೆ, ನಿರ್ಮಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಭಟ್ ಬಾಕ್ರಬೈಲು ಅವರು, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ 15ನೆ ವರ್ಷಾಚರಣೆಯ ಪ್ರಯುಕ್ತ ಜ.28, 29ರಂದು ಚಿಕ್ಕಮಗಳೂರಿನಲ್ಲಿ ‘ಸೌಹಾರ್ದ ಮಂಟಪ’ ಹಮ್ಮಿಕೊಂಡಿದ್ದೇವೆ. ಮಾನವ ಹಕ್ಕುಗಳ ಹೋರಾಟಗಾರ್ತಿ ಟೀಸ್ತಾ ಸೆಟಲ್ವಾಡ್, ಕರ್ನಾಟಕ ಸರಕಾರದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಅಮೀನ್ ಮಟ್ಟು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್,ಎಸ್. ದೊರೆಸ್ವಾಮಿ, ಗುಜರಾತ್ ವಿಧಾನಸಭಾ ಸದಸ್ಯ ಜಿಗ್ನೇಶ್ ಮೇವಾನಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.