×
Ad

​ಕ್ರಿಸ್ಮಸ್ : ಬಡವರ ಆಹಾರ ಸಂರಕ್ಷಣೆಗೆ ಬಿಷಪ್‌ರಿಂದ ಫ್ರಿಡ್ಜ್ ಕೊಡುಗೆ

Update: 2017-12-23 22:11 IST

ಮಂಗಳೂರು, ಡಿ. 23: ಸಣ್ಣ ಪುಟ್ಟ ಕಾರಣಗಳಿಗಾಗಿ ಒಡೆದುಹೋಗುವ ಕುಟುಂಬಗಳನ್ನು ಒಂದು ಗೂಡಿಸಲು ಕೌಟುಂಬಿಕ ಮೌಲ್ಯಗಳನ್ನು ಉಳಿಸಿಕೊಂಡು ಕುಟುಂಬ ವ್ಯವಸ್ಥೆ ಉಳಿಸಲು ಜಾಗೃತಿ ಕಾರ್ಯಕ್ರಮವನ್ನು ಹೊಸ ವರ್ಷದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ ಬಿಷಪ್ ಅತೀ.ವಂ.ಡಾ.ಅಲೊಶಿಯಸ್ ಪಾವ್ಲ್ ಡಿ ಸೋಜ ಮಾಧ್ಯಮ ಸಂವಾದ ಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.

ಪೋಪ್ ಪ್ರಾನ್ಸಿಸ್ ರವರು ಹೇಳಿದಂತೆ ನಾವು ಕೇವಲ ಮಾತಿನಿಂದಾಗಲಿ, ಬಾಯಿ ಉಪಚಾರದಿಂದಾಗಲಿ ಪ್ರೀತಿಸುವವರಾಗ ಬಾರದು. ನಮ್ಮ ಪ್ರೀತಿ ನಮ್ಮ ಕೆಲಸದ ಮೂಲಕ ವ್ಯಕ್ತವಾಗಬೇಕು. ಆ ಆದೇಶದ ಪ್ರಕಾರ ಮಂಗಳೂರು ಧರ್ಮ ಪ್ರಾಂತದಲ್ಲಿ ಸಾರ್ವಜನಿಕರಿಗೆ ಉಚಿತ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಬಿಷಪ್ ಕಂಪೌಂಡಿನ ಒಳಗೆ ಆಹಾರ ಸಂರಕ್ಷಣೆಗೆ ಫ್ರಿಡ್ಜ್ ನ್ನು ನೀಡಲು ನಿರ್ಧರಿಸಲಾಗಿದೆ .ಇದನ್ನು ದಾನಿಗಳು ಬಡವರಿಗೆ ಆಹಾರ ವಿತರಿಸಲು ಬಳಸಿಕೊಳ್ಳಬಹುದು. ಬಡವರು ಈ ಫ್ರಿಡ್ಜ್‌ನಲ್ಲಿ ಸಂಗ್ರಹವಾದ ಆಹಾರ ಪಡೆದುಕೊಳ್ಳಬಹುದು. ನಗರದ ಮಿಲಾಗ್ರೀಸ್ ಚರ್ಚ್ ವಠಾರದಲ್ಲಿ ಕ್ರಿಸ್‌ಮಸ್ ಪ್ರಯುಕ್ತ ಬಡವರಿಗೆ ಶನಿವಾರ ಅನ್ನದಾನದೊಂದಿಗೆ ಕ್ರಿಸ್ಮಸ್ ಆಚರಣೆಯ ಕಾರ್ಯಕ್ರಮ ನಡೆಯಲಿದೆ. ಕುಟುಂಬದ ಜನರು ದಿನದಲ್ಲಿ ಒಂದು ಗಂಟೆಯಾದರೂ ಮೊಬೈಲ್ ಕಂಪ್ಯೂಟರ್ ನಿಂದ ಮುಕ್ತರಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಳೆಯಬೇಕು. ಇದರಿಂದ ಕುಟುಂಬದ ವಾತವರಣ ಚೆನ್ನಾಗಿರುತ್ತದೆ. ಕುಟುಂಬ ಶಾಂತಿ, ಪ್ರೀತಿ, ಮಮತೆಯ ಮಂದಿರವಾಗ ಬೇಕು .ಪ್ರತಿಯೊಬ್ಬರಿಗೂ ಕುಟುಂಬದ ಸಹಜೀವನದ ಮಹತ್ವ ಸಾರುವುದೇ ಕ್ರಿಸ್ಮಸ್ ಆಚರಣೆಯ ಸಂದೇಶ. ಕ್ರಿಸ್ಮಸ್ ಹೊಸ ವರುಷ ಎಲ್ಲರಿಗೂ ನೆಮ್ಮದಿ ಸಂತೋಷವನ್ನು ತರಲಿ ಎಂದು ಬಿಷಪ್ ಶುಭ ಹಾರೈಸಿದರು.

ಸುದ್ದಿಗೋಷ್ಠಿಯಲ್ಲಿ ಧರ್ಮ ಪ್ರಾಂತ್ಯದ ಪ್ರಧಾನ ಧರ್ಮ ಗುರುಗಳಾದ ಮೊನ್ಸಿಂಜೊರ್ ಡನ್ನಿಸ್ ಮೊರಾಸ್ ಪ್ರಭು, ಧರ್ಮಪ್ರಾಂತ್ಯದ ಚಾನ್ಸಲರ್ ವಂ.ಹೆನ್ರಿ ಸಿಕ್ವೇರಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ.ವಿಲಿಯಂ ಮಿನೇಜಸ್, ಪಾಲನಾ ಪರಿಷತ್ತಿನ ಕಾರ್ಯದರ್ಶಿ ಎಂ.ಪಿ.ನರೋನ್ಹಾ, ಮಾರ್ಸೆಲ್ ಮೊಂತೆರೋ, ರೆಮಂಡ್ ಡಿಕುನ್ಹಾ ಮತ್ತು ಎಲಿಯಾಸ್ ಫೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News