ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ
ಮಂಗಳೂರು, ಡಿ. 23: ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಶಾಲಾ ಬಾಲಕಿಯೋರ್ವಳ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಚಾರವಾದಿ ಸಂಘದ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ ಅವರು, ಹಾಡಹಗಲೇ ದಲಿತ ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರಗೈದು ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇದು ಮನುವಾದಿಗಳ ಮುಂದುವರಿದ ಅಟ್ಟಹಾಸ. ಇಂತಹ ಘಟನೆಗಳಿಗೆ ಹಿಂದೂತ್ವಪರ ಸಂಘಟನೆಗಳು, ರಾಜಕೀಯ ಪಕ್ಷ ಸಹಿತ ಆ ಪಕ್ಷದ ಜನಪ್ರತಿನಿಧಿಗಳು ಬೆಂಬಲ ನೀಡುತ್ತಿವೆ. ಇಂತಹ ಬೆಳವಣಿಗೆಗಳು ನಡೆಯುತ್ತಿರುವಾಗ ಹತ್ಯೆಯಾಗಿರುವ ವಿದ್ಯಾರ್ಥಿನಿಗೆ ನ್ಯಾಯ ಸಿಗುವುದನ್ನು ನಿರೀಕ್ಷಿಸಬಹುದೇ ಎಂದು ಪ್ರಶ್ನಿಸಿದರು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳು ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಧರ್ಮ ರಕ್ಷಣೆ, ದೇಶ ಭಕ್ತಿಯ ಹೆಸರಿನಲ್ಲಿ ರಾಜ್ಯದಲ್ಲಿ ದೌರ್ಜನ್ಯಗಳು ಮುಂದುವರಿದಿವೆ. ಈ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳಬೇಕು. ದಲಿತ ಬಾಲಕಿಯ ಮೇಲೆ ನಡೆದಿರುವ ಹೇಯ ಘಟನೆ ಮತ್ತೊಮ್ಮೆ ಮರುಕಳುಸಬಾರದು ಎಂದು ಆಗ್ರಹಿಸಿದರು.
ಶೋಷಣೆಗೊಳಗಾದ ಸಮುದಾಯಗಳ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸಮಾಜ ಘಾತುಕ ಶಕ್ತಿಗಳಿಗೆ ಇಂತಹ ವರ್ಗದ ಜನರೇ ಬಲಿಯಾಗುತ್ತಿದ್ದಾರೆ. ಇದು ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿದೆ. ಇದನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಶೀಘ್ರ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುನೀರ್ ಕಾಟಿಳ್ಳ ಆಗ್ರಹಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್ ಮಾತನಾಡಿ, ಹಿಂದೂಗಳ ಮೇಲೆ ಹತ್ಯೆ ನಡೆಯುವಾಗ ಬೀದಿಗಿಳಿದು ಹೋರಾಟ ನಡೆಸುವ ಬಿಜೆಪಿ ನಾಯಕರು, ಸಂಘಪರಿವಾರದವರು ಬಾಲಕಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಹಿಂದೂಗಳ ಮೇಲಿನ ಹತ್ಯೆ ವಿಚಾರದಲ್ಲಿ ಹೇಳಿಕೆ ನೀಡುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು, ದಲಿತ ಹುಡುಗಿಯೊಬ್ಬಳ ಮೇಲಿನ ಅತ್ಯಾಚಾರ ಮತ್ತು ಕೊಲೆ ವಿಚಾರದಲ್ಲಿ ಯಾಕೆ ಮಾತು ಎತ್ತಿಲ್ಲ. ಶೋಭಾ ಅವರಿಗೆ ದಲಿತರ ಪ್ರಾಣ ಮುಖ್ಯವಲ್ಲ. ಅವರಿಗೆ ಅಧಿಕಾರ ಬೇಕು. ರಾಜಕೀಯ ಮಾಡುವುದು ಅವರಿಗೆ ಮುಖ್ಯವಾಗಿದೆ ಎಂದು ದೇವದಾಸ್ ಆರೋಪಿಸಿದರು.
ದಸಂಸ ದ.ಕ. ಜಿಲ್ಲಾ ಸಂಚಾಲಕ ರಘು ಕೆ.ಎಕ್ಕಾರ್, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ, ಶಿವಪ್ಪ ಅಟ್ಟೋಳೆ ಪುತ್ತೂರು ಮತ್ತಿತತರರು ಉಪಸ್ಥಿತರಿದ್ದರು.
‘ದಾನ’ ಬದಲಿಗೆ ‘ದನ’ ಆಗಿದ್ದರೆ..? ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕೆಲವೇ ಮಂದಿ ಸೇರಿದ್ದನ್ನು ಕಂಡು ನರೇಂದ್ರ ನಾಯಕ್ ಅವರು, ‘ದಾನ’ ಬದಲಿಗೆ ‘ದನ’ ಆಗಿದ್ದರೆ... ‘‘ನಮ್ಮ ಮಾತೆಯನ್ನು ಕಡಿದು ಕೊಂದರು’’ ಎಂದು ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಸೇರುತ್ತಿದ್ದರು ಎಂದು ವ್ಯಂಗ್ಯವಾಡಿದರು.
ದಾನಮ್ಮ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆಯನ್ನು ನಾಗರಿಕ ಸಮಾಜ ಖಂಡಿಸಬೇಕು. ಸಮಾಜ ಘಾತುಕ ಶಕ್ತಿಗಳಿಗೆ ಇಂದು ದಾನಮ್ಮ ಬಲಿಯಾಗಿದ್ದರೆ, ನಾಳೆ ಇನ್ಯಾರೋ ಬಲಿಯಾಗಬಹುದು. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ನರೇಂದ್ರ ನಾಯಕ್ ಹೇಳಿದರು.