×
Ad

ಕದ್ರಿ ದೇವಳದಲ್ಲಿ ಇರುವ ಧ್ವನಿವರ್ಧಕದ ವಿರುದ್ಧ ದೂರು:

Update: 2017-12-23 22:59 IST

ಮಂಗಳೂರು, ಡಿ. 23: ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಇರುವ ಧ್ವನಿವರ್ಧಕದ ವಿರುದ್ಧ ಸ್ಥಳೀಯರೊಬ್ಬರು ಮೇಯರ್ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿರುವುದು ಸ್ಥಳೀಯರನ್ನು ಕೆರಳಿಸುವಂತೆ ಮಾಡಿದೆ.  

ಕದ್ರಿ ದೇವಳದ ಧ್ವನಿವರ್ಧಕದಿಂದ ಪರಿಸರದಲ್ಲಿರುವ ವಸತಿ ಸಮುಚ್ಚಯಗಳಲ್ಲಿ ವಾಸವಿರುವವರಿಗೆ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಈ ದೇವಳದ ಆವರಣದಲ್ಲಿ ಭಕ್ತರಿಗೆ ಅವಶ್ಯ ಇರುವಷ್ಟೇ ಧ್ವನಿಯನ್ನು ಬಳಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಬೇಕು. ಅನಾರೋಗ್ಯದಿಂದ ಬಳಲುತ್ತಿರು ವವರ ಮೇಲೆ ಶಬ್ದ ಮಾಲಿನ್ಯ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಬ್ಲೇನಿ ಡಿಸೋಜ ಅವರು ಮೇಯರ್ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದರು. ದೂರನ್ನು ಪರಿಗಣಿಸಿದ ಧಾರ್ಮಿಕ ದತ್ತಿ ಇಲಾಖೆ ದೇವಳದ ಕಾರ್ಯನಿರ್ವಹಣಾಧಿಕಾರಿಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.

ಶನಿವಾರ ದೂರು ವಿಚಾರ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದುದನ್ನು ಗಮನಿಸಿದ ಸಂಘಟನೆಯೊಂದರ ಕಾರ್ಯಕರ್ತರು ಕದ್ರಿ ದೇವಳದ ಆವರಣಕ್ಕೆ ಬಂದು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ಕದ್ರಿ ದೇವಳದಲ್ಲಿ ಕಳೆದ ಹಲವು ವರ್ಷಗಳಿಂದ ಯಕ್ಷಗಾನ ಸಹಿತ ಧಾರ್ಮಿಕ ಕಾರ್ಯಕ್ರಮ ನಡೆದುಕೊಂಡು ಬರುತ್ತಿವೆ. ಸಾರ್ವಜನಿಕ ಸ್ಥಳವಾದ ಕಾರಣ ಧ್ವನಿವರ್ಧಕ ಬಳಸುವುದು ಅನಿವಾರ್ಯ. ಸರಕಾರಿ ಆದೇಶವನ್ನು ಪಾಲಿಸಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯೊಂದರ ಮುಖಂಡರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಬ್ಲೇನಿ ಡಿಸೋಜ ವಿರುದ್ಧ ದೂರು

ಸ್ಥಳೀಯ ಬಿ.ವರದರಾಜ್ ಬಾಳಿಗ ಎಂಬವರು ಬ್ಲೇನಿ ಡಿಸೋಜ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ''2016 ಆ. 22ರಂದು ಅನಾರೋಗ್ಯದಲ್ಲಿದ್ದ ಸಂದರ್ಭ ಕದ್ರಿ ದೇವಳದ ಸ್ಥಳೀಯ ನಿವಾಸಿ ಬ್ಲೇನಿ ಡಿಸೋಜ ಆಗಮಿಸಿ ಕದ್ರಿ ದೇವಳದ ಅಭಿಷೇಕ ಮಂದಿರದ ಹೊರಗಡೆ ಬಳಸುವ ಧ್ವನಿವರ್ಧಕ ತನ್ನ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಮೇಯರ್ ಅವರಿಗೆ ಮನವಿ ಸಲ್ಲಿಸಲು ಹೆಸರು ಮತ್ತು ಸಹಿಯನ್ನು ಪಡೆದುಕೊಂಡಿದ್ದರು. ನಾನು ಕೂಡಾ ಕದ್ರಿ ದೇವಳದ ಭಕ್ತನಾಗಿದ್ದು, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. 2017 ಡಿ.4 ರಂದು ಬ್ಲೇನಿ ಡಿಸೋಜ ಮತ್ತೊಮ್ಮೆ ಮೇಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದು ತನ್ನ ಗಮನಕ್ಕೆ ಬಂದಿದ್ದು, ಹೆಸರು ಮತ್ತು ಸಹಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಬ್ಲೇನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ'' ಎಂದು ಬಿ.ವರದರಾಜ ಬಾಳಿಗ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News