×
Ad

ಬೈಕಂಪಾಡಿಯಲ್ಲಿ ಅಂಗಡಿಗಳ ಧ್ವಂಸ: ಪಣಂಬೂರು ಠಾಣೆಯಲ್ಲಿ ದೂರು ದಾಖಲು

Update: 2017-12-24 22:56 IST

ಮಂಗಳೂರು, ಡಿ. 23: ಬೈಕಂಪಾಡಿಯಲ್ಲಿ ನಡೆದ ಅಂಗಡಿಗಳ ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿ ಅಂಗಡಿಯ ಮಾಲಕರು ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಎಂಟು ಅಂಗಡಿಗಳನ್ನು ಜೆಸಿಬಿ ಮೂಲಕ ಧ್ವಂಸ ಮಾಡಲಾಗಿದೆ. ಈ ಬಗ್ಗೆ ಏಳು ಮಂದಿ ಅಂಗಡಿ, ಹೊಟೇಲ್ ಮಾಲಕರು ಸೇರಿ ದೂರು ನೀಡಿದ್ದರೆ, ವೈನ್ ಶಾಪ್‌ನ ಮಾಲಕರು ಪ್ರತ್ಯೇಕ ದೂರು ನೀಡಿದ್ದಾರೆ.

7 ಮಂದಿ ಅಂಗಡಿಯ ಮಾಲಕರು ಅಂಗಡಿ ಕಟ್ಟಡದ ಹಿಂದಿರುವ ಮನೆ ನಿವಾಸಿ ರಾಜಾರಾಂ ಎಂಬವರ ವಿರುದ್ಧ ದೂರು ನೀಡಿದ್ದರೆ, ವೈಪ್ ಶಾಪ್‌ನವರು ರಾಜಾರಾಂ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ದೂರು ನೀಡಿದ್ದಾರೆ. ಎರಡೂ ದೂರುಗಳನ್ನು ದಾಖಲಿಸಿದ್ದೇವೆ ಎಂದು ಪಣಂಬೂರು ಪಿಎಸ್‌ಐ ತಿಳಿಸಿದ್ದಾರೆ.

92 ಲಕ್ಷ ರೂ. ನಷ್ಟ

ಧ್ವಂಸ ಕಾರ್ಯಾಚರಣೆಯಿಂದ ಏಳು ಅಂಗಡಿಗಳ ಮಾಲಕರಿಗೆ ಸುಮಾರು 67 ಲಕ್ಷ ರೂ. ನಷ್ಟ ಸಂಭಿಸಿದೆ ಎಂದು ದೂರು ನೀಡಲಾಗಿದ್ದರೆ, ವೈನ್‌ಶಾಪ್‌ನವರು ಘಟನೆಯಿಂದ ಸುಮಾರು 25 ಲಕ್ಷ ರೂ. ಕಳೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಅಧಿಕಾರಿಯ ವಿಚಾರಣೆ

ಕಟ್ಟಡ ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿ ಪ್ರಾಧಿಕಾರದ ಅಧಿಕಾರಿಯನ್ನು ಕರೆದು ವಿಚಾರಿಸಲಾಗಿದ್ದು, ಅವರು ಕಾರ್ಯಾಚರಣೆ ನಡೆಸಿಲ್ಲ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಟ್ಟಡದ ಹಿಂದಿರುವ ಮನೆಯ ನಿವಾಸಿ ರಾಜಾರಾಂ ಅವರೇ ಈ ಕೆಲಸವನ್ನು ಮಾಡಿರುವುದಾಗಿ ಮಾಲಕರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಅವರ ಮೇಲೆಯೇ ಅನುಮಾನಗಳು ವ್ಯಕ್ತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News